ಕಕ್ಕೇರಾ: ಇಲ್ಲಿನ ಶ್ರೀ ಸಂಗಮೇಶ್ವರ ಮಠದಲ್ಲಿ ಶ್ರೀ ಕರಿಯಪ್ಪ ತಾತಾ ಜಾತ್ರೋತ್ಸವ ನಿಮಿತ್ತ ಸೋಮವಾರ ಸಂಜೆ ಹೂವಿನ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.
ನಾಗದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಶ್ರೀಮಠದಲ್ಲಿರುವ ನಾಗದೇವತೆಗೆ ಮುತ್ತೈದೆಯರು ಹಾಲು ಅರ್ಪಿಸುವ ಮೂಲಕ ನಾಗದೇವರ ದಾರ ಕಟ್ಟಿಸಿಕೊಳ್ಳುವರು. ಈ ಮೂಲಕ ದೇವರಿಗೆ ಕೊಡೆ(ಛತ್ರಿ)ಗಳನ್ನು ಸಲ್ಲಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತ ವೃಂದ ಬೆಳಗ್ಗೆ ದೀರ್ಘದಂಡ ನಮಸ್ಕಾರ ಹಾಕುವುದು ಹಾಗೂ ಮೈಸೂರು ದಸರಾ ಖ್ಯಾತಿಯ ಬೀರಲಿಂಗೇಶ್ವರ ಡೊಳ್ಳಿನ ಸಂಘದವರು ಪದಗಳ ಮೂಲಕ ಭಕ್ತರನ್ನು ರಂಜಿಸುವರು.
ಸಂಜೆ ೫.೩೦ಕ್ಕೆ ವೈಭವದ ಹೂವಿನ ರಥೋತ್ಸವ ನಡೆಯಲಿದ್ದು, ರಥಕ್ಕೆ ಶ್ರೀಮಠ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಬೃಹದಾಕಾರದ ಹೂವಿನ ಹಾರ ಅರ್ಪಿಸಲಾಗುತ್ತದೆ. ಶ್ರೀ ನಂದಣ್ಣಪ್ಪ ಪೂಜಾರಿ, ಕರಿಮಡ್ಡೆಪ್ಪ ತಾತಾ, ಮಠದ ಅರ್ಚಕ ಮಾನಯ್ಯ ಪೂಜಾರಿ, ಟ್ರಸ್ಟ್ ಅಧ್ಯಕ್ಷ ಶ್ರೀ ಸೀತಾರಾಮನಾಯಕ ಗೌಡ ಜಹಾಗೀರದಾರ ನೇತೃತ್ವದ ಜಾತ್ರೋತ್ಸವಕ್ಕೆ ಲಕ್ಷಾಂತರ ಭಕ್ತ ಸಮೂಹ ಹರಿದುಬರಲಿದೆ. ಭಾನುವಾರ ರಾತ್ರಿ ವಿವಿಧ ಭಜನಾ ಮೇಳದವರಿಂದ ಭಜನಾ ಪದಗಳು ಮೊಳಗಿದವು.