ಗೋಣಿಕೊಪ್ಪ: ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದಿಂದ ಶುಕ್ರವಾರ ಆಯೋಜಿಸಲಾಗಿದ್ದ ಕಕ್ಕಡ ನಮ್ಮೆಯನ್ನು ದಕ್ಷಿಣ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಅರ್ಥಪೂರ್ಣವಾಗಿ ಆಚರಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ಮದ್ದು ಸೊಪ್ಪಿನಿಂದ ತಯಾರಿಸಿದ ಘಮಘಮಿಸುವ ಪಾಯಸ, ಮದ್ದ್‌ಪುಟ್ ಹಾಗೂ ನೂಲ್‌ಪುಟ್ಟ್ ಗಮನ ಸೆಳೆದವು. ಮುಂಜಾನೆಯಿಂದ ಸಂಜೆಯವರೆಗೂ ಮಹಿಳೆಯರಿಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಡುಗಾರಿಕೆ ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಹಿಳೆಯರಿಗೆ ಬಹುಮಾನ ನೀಡಲಾಯಿತು.
ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕೊಟ್ಟಂಗಡ ವಿಜುದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ದ.ಕೊಡಗಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ವಿಶೇಷವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಮದ್ದು ಸೊಪ್ಪು ವಿಶೇಷ ಗುಣಗಳುಳ್ಳ ಗಿಡವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮದ್ದು ಸೊಪ್ಪಿನ ಗಿಡಗಳನ್ನು ಹುಡುಕುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಪ್ರತಿ ಮನೆಯಲ್ಲಿ ಹಾಗೂ ತೋಟಗಳಲ್ಲಿ ಈ ಅಪರೂಪದ ಸೊಪ್ಪುಗಳನ್ನು ಬೆಳೆಯುವ ಮೂಲಕ ಮುಂದಿನ ಪೀಳಿಗೆಗೆ ಸೊಪ್ಪಿನ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ವಿಶೇಷವಾಗಿ ಆಸಕ್ತಿ ವಹಿಸಬೇಕು. ಪಟ್ಟಣದಲ್ಲಿರುವ ಮಹಿಳೆಯರು ಮದ್ದುಸೊಪ್ಪು ಗಿಡಗಳನ್ನು ಬೆಳೆಸಿ ಕಾಪಾಡಬೇಕು ಎಂದು ತಿಳಿಸಿದರು.
ಪೊಮ್ಮಕ್ಕಡ ಕೂಟದ ನಿರ್ದೇಶಕರಾದ ಪರದಂಡ ಸುಮಿಬೋಪಣ್ಣ, ಆಪಟ್ಟೀರ ಸೌಮ್ಯಾ ಮೊಣ್ಣಪ್ಪ, ಮಲ್ಲೆಂಗಡ ಮಮತ ಪೂಣಚ್ಚ, ಕಾರ್ಯದರ್ಶಿಗಳಾದ ಮುಕ್ಕಾಟೀರ ಬೀನಾ ಪ್ರಸನ್ನ, ನಿರ್ದೇಶಕಿ ಚೊಟೆಕಾಳಪಂಡ ಆಶಾ ಪ್ರಕಾಶ್, ಚೋವಂಡ ಜಮುನಾ ಉಪಸ್ಥಿತರಿದ್ದರು.