ಸೇಡಂ: ಸದಾ ಹಿಂದುಳಿದ್ದೇವೆ ಎಂಬ ಭಾವನೆಯೊಂದಿಗೆ ನಾವು ಕೆಲಸ ಮಾಡುತ್ತೇವೆ. ವಾಸ್ತವದಲ್ಲಿ ಕಲ್ಯಾಣ ಕರ್ನಾಟಕದ ಯುವ ಸಮುದಾಯ ಆಗಾಧ ಪ್ರತಿಭೆ ಹೊಂದಿದ್ದು, ಅದನ್ನು ಹೊರತರುವ ಕಾರ್ಯವಾಗಬೇಕಿದೆ ಎಂದು ಲೇಖಕ, ಸಾಹಿತಿ ಸಿದ್ದು ಯಾಪಲಪರವಿ ಹೇಳಿದರು.
ಪಟ್ಟಣದ ಮಾತೃಛಾಯಾ ಕಾಲೇಜು ರಸ್ತೆಯ ಅರಿವಿನ ಮನೆ ಸಭಾ ಭವನದಲ್ಲಿ ಶ್ರೀ ಕೊತ್ತಲ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಸಹಯೋಗದಡಿ ಸೋಮವಾರ ಆಯೋಜಿಸಿದ್ದ ಸಮಗ್ರ ವಿಕಾಸದಿಂದ ಅಕ್ಷಯ ವಿಕಾಸದೆಡೆಗೆ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪದವಿ ಮತ್ತು ಪ್ರಮಾಣಪತ್ರ ಪಡೆಯಲು ಮಾತ್ರ ಶಿಕ್ಷಣ ಎನ್ನುವ ಮಟ್ಟಕ್ಕೆ ಇಂದಿನ ವ್ಯವಸ್ಥೆ ಬಂದಿದೆ. ಭೌತಿಕವಾಗಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಕೇವಲ ಸಾಕ್ಷರರಾಗಿದ್ದೇವೆ ಎಂದರೆ ಸಾಕಾಗಲ್ಲ, ಜೀವನ ಕಟ್ಟಿಕೊಳ್ಳುವ ಕೌಶಲ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
೧೨ನೇ ಶತಮಾನದಲ್ಲಿ ಜಗತ್ತಿಗೆ ಸಂಸತ್ ಪರಿಚಯಿಸಿದವರು ನಾವು ಎಂಬುದನ್ನು ಮರೆಯಬಾರದು. ಕಾಯಕ ತತ್ವದ ಜೀವನ ನಮ್ಮದಾಗಬೇಕು. ನಮ್ಮ ಕಾಯಕದಲ್ಲಿ ಯಾವತ್ತಿಗೂ ಕೀಳರಿಮೆ ಬೇಡ. ಹಿಂದೆ ಶರಣರು ಸಹ ಅದನ್ನೇ ಪ್ರತಿಪಾದಿಸಿದ್ದರು. ಆದರೆ ಶರಣರ ಆದರ್ಶ ನಾವು ಪಾಲನೆ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಶಂಕರ ಸುಲೇಗಾವ್, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧಾ ಪಾಟೀಲ್, ರಂಗಾಯಣ ಮಾಜಿ ನಿರ್ದೆಶಕ ಪ್ರಭಾಕರ ಜೋಶಿ, ಸಾಹಿತಿಗಳಾದ ಮಹಿಪಾಲರೆಡ್ಡಿ ಮುನ್ನೂರ, ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ, ನಿವೃತ್ತ ಪ್ರಾಂಶುಪಾಲ ಹಾಸರೆಡ್ಡಿ ಮನ್ನೆ, ಪಿ.ಭೀಮರೆಡ್ಡಿ, ಶರಣಗೌಡ ಪಾಟೀಲ್ ಇತರರಿದ್ದರು. ಲಕ್ಷ್ಮೀ ಪ್ರಾರ್ಥಿಸಿದರು. ಶಾಮಸುಂದರ ಕಲಾಲ್ ಸ್ವಾಗತಿಸಿದರು. ಆರತಿ ಕಡಗಂಚಿ ನಿರೂಪಣೆ ಮಾಡಿದರು. ರೇವಣಸಿದ್ದ ಮಠ ವಂದಿಸಿದರು.
ಇಂಗ್ಲೆಂಡ್ ದೇಶದಲ್ಲಿ ಮಕ್ಕಳು ೧೮ ವಯಸ್ಸು ತುಂಬುತ್ತಿದ್ದಂತೆ ತಮ್ಮ ಬೇಕು ಬೇಡಗಳಿಗಾಗಿ ಯಾರ ಮೇಲೂ ಅವಲಂಬಿಸದೆ ಸ್ವತಃ ದುಡಿಯಲು ಶುರು ಮಾಡುತ್ತಾರೆ. ಆದರೆ ನಮ್ಮಲ್ಲಿ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಿ ಖರ್ಚಿಗೆ ಹಣವೂ ನೀಡುತ್ತಾರೆ. ಇದು ಸರಿಯಲ್ಲ.
| ಸಿದ್ದು ಯಾಪಲಪರವಿ ಸಾಹಿತಿ, ಲೇಖಕ