ಬೀದರ್: ರಾಜ್ಯ ಸರ್ಕಾರದ ವಿವಿಧ ಟ್ರಸ್ಟ್ ಮತ್ತು ಪ್ರತಿಷ್ಠಾನ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಟ್ರಸ್ಟ್ ಸ್ಥಾಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ನೇತೃತ್ವದ ನಿಯೋಗ ಭಾನುವಾರ ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಿ, ಬೀದರ್ ಜಿಲ್ಲೆಯಲ್ಲಿ ಜಯದೇವಿ ತಾಯಿ ಲಿಗಾಡೆ, ಕಲಬುರಗಿಯಲ್ಲಿ ಡಾ.ಎಸ್.ಎಂ. ಪಂಡಿತ, ಯಾದಗಿರಿಯಲ್ಲಿ ಎಂ.ಆರ್. ಬುದ್ಧಿವಂತ ಶೆಟ್ಟರ್, ರಾಯಚೂರಿನಲ್ಲಿ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಕೊಪ್ಪಳದಲ್ಲಿ ಡಾ.ಸಿದ್ದಯ್ಯ ಪುರಾಣಿಕ, ಬಳ್ಳಾರಿಯಲ್ಲಿ ಡಾ.ಸುಭದ್ರಮ್ಮ ಮನ್ಸೂರ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಎಂ.ಪಿ. ಪ್ರಕಾಶ ಹೆಸರಿನಲ್ಲಿ ಸರ್ಕಾರ ಟ್ರಸ್ಟ್ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.
ಈಗಾಗಲೇ ಮೈಸೂರು ಮತ್ತು ಬೆಂಗಳೂರು ವಿಭಾಗದ ಕಲಾವಿದರಿಗೆ ಸರ್ಕಾರ ನೀಡುತ್ತಿರುವ ಗುರುತಿನ ಚೀಟಿಯನ್ನು ಕಲ್ಯಾಣ ಕರ್ನಾಟಕದವರಿಗೂ ವಿತರಿಸಬೇಕು. ಬುಡಕಟ್ಟು, ಅಲೆಮಾರಿ, ಹಗಲುವೇಷ ಸೇರಿ ವಿವಿಧ ಪ್ರಕಾರದ ಕಲಾವಿದರಿಗೆ ಮಾಸಾಶನ ಮತ್ತು ಪ್ರಶಸ್ತಿ ಪಡೆಯಲು ದಾಖಲೆಗಳಲ್ಲಿ ವಿಶೇಷ ವಿನಾಯಿತಿ ನೀಡಬೇಕು ಎಂದು ಕೋರಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸಾಂಸ್ಕೃತಿಕ ಉದ್ದೇಶಕ್ಕೆ ಕ್ರಿಯಾಯೋಜನೆ ರೂಪಿಸಿ ಈ ಭಾಗದ ಏಳು ಜಿಲ್ಲೆಗಳಲ್ಲಿ ಉತ್ಸವ ನಡೆಸಬೇಕು. ಹಂಪಿ ಉತ್ಸವದಂತೆ ಈ ಭಾಗದ ಐತಿಹಾಸಿಕ ಕ್ಷೇತ್ರಗಳ ಉತ್ಸವ ಆಯೋಜಿಸಬೇಕು. ಸಂತ ಶಿಶುನಾಳ ಶರೀಫ್ ಅವರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಪ್ರಸಿದ್ಧ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ವಿವಿಧ ಅಕಾಡೆಮಿ, ಪ್ರಾಧಿಕಾರ ಅಧ್ಯಕ್ಷ ಮತ್ತು ಸದಸ್ಯರ ನೇಮಕದಲ್ಲಿ ಕಕಕ್ಕೆ ಆದ್ಯತೆ ನೀಡುವಂತೆ ಹಕ್ಕೊತ್ತಾಯ ಮಂಡಿಸಿದೆ.
ಮನವಿ ಸ್ವೀಕರಿಸಿದ ಸಚಿವ ತಂಗಡಗಿ ಬರುವ ದಿನಗಳಲ್ಲಿ ಹಂತ-ಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಎಂದು ಭರವಸೆ ನೀಡಿದ್ದಾರೆ ಎಂದು ಸೋನಾರೆ ತಿಳಿಸಿದ್ದಾರೆ.
ಒಕ್ಕೂಟದ ಉಪಾಧ್ಯಕ್ಷ ನಾರಾಯಣಪ್ಪ ಮಾಡಸಿರವಾರ್, ಸಹ ಕಾರ್ಯದರ್ಶಿ ಅಂಬರೀಶ್ ಹಸಮಕಲ್, ಕೊಪ್ಪಳ ಜಿಲ್ಲಾಧ್ಯಕ್ಷ ಲಕ್ಷ್ಮಣ ಪೀರಗಾರ, ಡಿ.ಎನ್. ಪೂಜಾರಿ, ಶರಣು ಶಟ್ಟರ್, ಚಂದ್ರಶೇಖರ ಲಿಂಗದಳ್ಳಿ, ಮುಸಲಯ್ಯ ಮಾನವಿ, ಶಿವಲಿಂಗಪ್ಪ ಸಿದ್ದಾಪುರ, ವಿಭೂತಿ ಗುಂಡಪ್ಪ, ರಂಗಣ್ಣ ತಡಕಲ್, ಮಲ್ಲಪ ಪೂಜಾರಿ ಮಸ್ಕಿ, ತಿಮ್ಮಣ್ಣ ನಾಯಕ, ಬಸವರಾಜ ಗ್ಯಾಂಗ್ಮ್ಯಾನ್, ಹಣಮಂತ್ರ ಭಜಂತ್ರಿ, ಯಮನಪ್ಪ ಬಸ್ಸಾಪುರ, ಸಂತೋಷ ಎಣಕೂರೆ, ಮಾರುತಿ ಎಣಕೂರೆ, ಶಿವಶಂಕ್ರಪ್ಪ, ಉಮಾಪತಿ ಕನ್ನಾರಿ, ಮಾರೇಶ ಸಿದ್ದಾಪುರ, ಚಿನ್ನಾಪ್ಪ, ಯಂಕಣ್ಣಗೌಡ ದಿತಗಿ, ನಾಗರಾಜ ಹೊಲಕಲದಿನ್ನಿ ನಿಯೋಗದಲ್ಲಿದ್ದರು.