ಹೊಳೆಹೊನ್ನೂರು: ಅರಹತೊಳಲು ಕೈಮರದ ಸಮೀಪ ಹನುಮಂತಾಪುರ ರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗದ ವಿದ್ಯುತ್ ಕಂಬದಲ್ಲಿ ತಂತಿ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸೋಮವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಂದ್ರಶೇಖರ್ ಲಮಾಣಿ(27) ಮೃತರು. ಬ್ಯಾಡಗಿ ತಾಲೂಕು ಸಿಡೆನೂರು ಗ್ರಾಮದ ಚಂದ್ರಶೇಖರ್ ಜ್ಯೂನಿಯರ್ ಲೈನ್‌ಮನ್ ಆಗಿ ಕೈಮರ ವೃತ್ತದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಂದ್ರಶೇಖರ್‌ಗೆ ನಾಲ್ಕು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು.
ತೋಟಗಳ ಐಪಿ ಸೆಟ್ ಲೈನ್ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿದ್ದು ಕಂಬದ ಮೇಲಿಂದ ಬಿದ್ದ ಚಂದ್ರಶೇಖರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಹೊನ್ನೂರಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲೈನ್ ಚಾರ್ಜ್ ಮಾಡಲು ಜ್ಯೂನಿಯರ್‌ಗಳನ್ನು ನೇಮಿಸಿದ ಕಾರಣ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತನ ಸ್ವಗ್ರಾಮ ಸಿಡೆನೂರಿಗೆ ಮೃತದೇಹ ಕೊಂಡೊಯ್ಯಲಾಯಿತು.