ಕಂಪ್ಲಿ: ಪಟ್ಟಣದ ಆಯಕಟ್ಟಿನ ಆಯ್ದ ಸ್ಥಳಗಳಲ್ಲಿ ಜನರ ಸಂಚಲನೆಯ ದೃಶ್ಯ ಅರಿಯಲು ಸಿಸಿ ಟಿವಿ ಕ್ಯಾಮರಾಗಳ ಕಣ್ಗಾವಲು ಏರ್ಪಡಿಸಿದ್ದು, ಅಪಘಾತ, ಅಪರಾಧ ಪತ್ತೆಗಳ ಅನುಕೂಲವಾಗಲಿದೆ.
ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಪುರಸಭೆಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಮೂಲಕ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಬೇಡಿಕೆ ಈಡೇರಿಸಲಾಗಿದೆ. ನಡುವಿನ ಮಸೀದಿ, ಉದ್ಭವ ಮಹಾಗಣಪತಿ ಗುಡಿ, ಬಳ್ಳಾರಿ ಮಾರ್ಗದಲ್ಲಿರುವ ಕರ್ನಾಟಕ ಎಟಿಎಂ, ಮುದ್ದಾಪುರ ಅಗಸಿ, ಕೋಟೆ ಬ್ರಿಡ್ಜ್ ಬಳಿ, ಅಂಬೇಡ್ಕರ್, ವಾಲ್ಮೀಕಿ ವೃತ್ತಗಳ ಬಳಿ, ಕೊಟ್ಟಾಲ್ ರಸ್ತೆಯ ಸಾಯಿಬಾಬಾ ಗುಡಿ ಬಳಿ, ಕೊಟ್ಟಾಲ್ ರಸ್ತೆಯ ರಾಘವೇಂದ್ರ ಶಾಖಾಮಠ ಕ್ರಾಸ್, ಗವಿಸಿದ್ಧಪ್ಪ ವೃತ್ತ ಸೇರಿದಂತೆ 12 ಕಡೆ 34 ಸಿಸಿ ಕ್ಯಾಮರಾಗಳನ್ನು ಆಯೋಜಿಸಲು ಉದ್ದೇಶಿಸಿದ್ದು, ಸದ್ಯ 21 ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ 8ಎಂಪಿ ಮತ್ತು 5ಎಂಪಿ ಸಾಮರ್ಥ್ಯದ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 8 ಎಂಪಿ ಕ್ಯಾಮರಾ ಸುಮಾರು 60 ಮೀಟರ್, 5ಎಂಪಿ ಕ್ಯಾಮರಾ ಸುಮಾರು 30 ಮೀಟರ್ ಅಂತರದಲ್ಲಿನ ಚಿತ್ರಗಳನ್ನು ಸೆರೆ ಹಿಡಿಯಬಲ್ಲದು. ಪಟ್ಟಣದ ಜನಸಂದಣಿ ಸ್ಥಳಗಳಲ್ಲಿ ಅಪಘಾತ, ಕಳ್ಳತನ, ಕಾನೂನು ಬಾಹಿರ ಚಟುವಟಿಕೆಗಳ ಪತ್ತೆಗೆ ಸಿಸಿ ಕಣ್ಗಾವಲು ಅಗತ್ಯ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್‌ಪಿ ಪ್ರಸಾದ್ ಕೆ.ಗೋಖಲೆ ಪಿಐ ಕೆ.ಬಿ.ವಾಸುಕುಮಾರ್‌ಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆಯ ಸಹಯೋಗದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಯಾಗಿದೆ.