ಕಂಪ್ಲಿ: ತಾಲೂಕಿನಾದ್ಯಂತ ಮಂಗಳವಾರ ಉತ್ತಮ ಮಳೆ ಸುರಿಯಿತು. ಇದರಿಂದಾಗಿ ತಂಪಿನ ವಾತಾವರಣ ಮೂಡಿದೆ.
ಭಾನುವಾರ ರಾತ್ರಿ 12.5 ಮಿ.ಮೀ, ಸೋಮವಾರ 1.4 ಮಿ.ಮೀ. ಮಳೆ ಸುರಿದಿದ್ದು, ಮಂಗಳವಾರ ಬೆಳಗಿನಿಂದಲೂ ಮಳೆ ಬರುತ್ತಿದೆ. ಬಾಳೆ ಹಾಗೂ ಭತ್ತದ ಕಟಾವು ಮುಗಿದಿರುವುದರಿಂದ ಕೃಷಿಕರಿಗೆ ತೊಂದರೆಯಾಗಿಲ್ಲ. ಮುಂಗಾರು ಬಿತ್ತನೆಗೆ ಮಳೆ ಪೂರಕ ವಾತಾವರಣ ನಿರ್ಮಿಸಿದೆ.
ಮಂಗಳವಾರ ಸಂತೆ ದಿನವಾಗಿದ್ದು, ಮಳೆಯಿಂದಾಗಿ ಪೇಟೆಯಲ್ಲಿ ವ್ಯಾಪಾರ ಮಂದವಾಗಿತ್ತು. ಮದುವೆ, ಶುಭ ಕಾರ್ಯಗಳ ಋತುಮಾನ ಹಿನ್ನೆಲೆಯಲ್ಲಿ ಗ್ರಾಮೀಣ ಜನತೆ ಮಳೆಯ ನಡುವೆಯೇ ಸಾಮಗ್ರಿಗಳ ಖರೀದಿಗಾಗಿ ಪಟ್ಟಣಕ್ಕೆ ಬಂದಿದ್ದರು. ಮಳೆಯ ಮಧ್ಯೆಯೇ ತಳ್ಳುಗಾಡಿ, ಟಂಟಂ ಗಾಡಿಗಳಲ್ಲಿ ವ್ಯಾಪಾರ ಮುಂದುವರಿದಿತ್ತು.