ಜಿಲ್ಲೆ

ಕಂಪ್ಲಿ ಸೇತುವೆ ಹೊಸದಾಗಿ ನಿರ್ಮಾಣ

ಅಶೋಕ್ ಕುಮಾರ್ ಎನ್

ಕಂಪ್ಲಿ: ಪಟ್ಟಣದ ಹೊರವಲಯದಲ್ಲಿ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸುವ ಅವಶ್ಯವಿದ್ದು, ಪ್ರಸಕ್ತ ಸರ್ಕಾರದ ಅವಧಿಯಲ್ಲೇ ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ತುಂಗಭದ್ರಾ ನದಿ ಸೇತುವೆಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿ, ಗಂಗಾವತಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಹಳೆಯದಾಗಿದ್ದು ಹೊಸ ಸೇತುವೆ ಅವಶ್ಯವಿದೆ ಎಂದು ಶಾಸಕರು ನಾಲ್ಕೈದು ಸಲ ಮನವಿ ಮಾಡಿದ್ದಾರೆ. ತಂತ್ರಜ್ಞರು ಹಾಗೂ ಶಾಸಕರೊಂದಿಗೆ ಸೇತುವೆ ನಿರ್ಮಾಣ ಕುರಿತು ಚರ್ಚಿಸುತ್ತೇನೆ. ಕಂಪ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಲಾಗುವುದು. ಮುಂದಿನ ಸಲ ಬಂದಾಗ ಕ್ಷೇತ್ರದ ಎಲ್ಲ ಸೇತುವೆ ಪರಿಶೀಲಿಸುವುದಾಗಿ ತಿಳಿಸಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ತುಂಗಭದ್ರಾ ನದಿ ಸೇತುವೆ ನಿರ್ಮಾಣವಾಗಿ ಆರು ದಶಕಗಳಾಗಿದ್ದು ಶಿಥಿಲಗೊಂಡಿದೆ. ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿದು ಬಂದಲ್ಲಿ ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಳ್ಳುತ್ತದೆ. ಸುಮಾರು 35 ಕಿ.ಮೀ. ದೂರ ಸುತ್ತಿ ಬಳಸಿ ಸಂಚರಿಸಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಶೀಘ್ರ ನೂತನ ಸೇತುವೆ ನಿರ್ಮಿಸುವಂತೆ ಸಚಿವರನ್ನು ಒತ್ತಾಯಿಸಿದರು.

ಕಂಪ್ಲಿಯ ನಾನಾ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹೊಸ ಸೇತುವೆ ನಿರ್ಮಾಣ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಎಂ.ಉಸ್ಮಾನ್, ಕೆ.ಎಸ್.ಚಾಂದ್‌ಬಾಷ, ಲಡ್ಡು ಹೊನ್ನುರವಲಿ, ಎನ್.ಹಬೀಬ್ ರೆಹಮಾನ್, ಬಿ.ಸಿದ್ದಪ್ಪ, ಕಾಮರೆಡ್ಡಿ ಚಂದ್ರಶೇಖರ, ಸಿ.ಆರ್.ಹನುಮಂತ, ಬಿ.ಜಾಫರ್, ಪುರಸಭೆ ಸದಸ್ಯರು, ಇತರರಿದ್ದರು.