ಜಿಲ್ಲೆ

ಕಂಪ್ಲಿ ಸೇತುವೆ ಮುಳುಗಡೆ ಸಂಚಾರ ಬಂದ್

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.10ಲಕ್ಷ ಕ್ಯೂಸೆಕ್ ನೀರು ಹರಿಸಿರುವುದರಿಂದ ಗಂಗಾವತಿ ಸಂಪರ್ಕಿಸುವ ಸೇತುವೆ ಸೋಮವಾರ ಮುಳುಗಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕೋಟೆ ಪಂಪಾಪತಿ ದೇವಸ್ಥಾನ ಕೆಳಭಾಗದ ಉತ್ತರಕ್ರಿಯೆ ಮಂಟಪ, ಮಂತ್ರಾಲಯ ಮಠ ಯತಿ ಪರಂಪರೆಯ ಮಾಧವ ತೀರ್ಥರ ಬೃಂದಾವನ ಸೇರಿದಂತೆ ವಿವಿಧ ದೇವಸ್ಥಾನಗಳು, ಕಬ್ಬು, ಬಾಳೆ ಬೆಳೆ ಜಲಾವೃತಗೊಂಡಿವೆ. ಕೋಟೆ ಆಂಜನೇಯ ದೇವಸ್ಥಾನ ಬಳಿಯಿಂದ ನದಿಗೆ ಸಾಗುವ ಸ್ಥಳದಲ್ಲಿ ನದಿ ನೀರು ನುಗ್ಗಿದ್ದರಿಂದ ಸ್ಮಶಾನ ರಸ್ತೆ ಜಲಾವೃತಗೊಂಡಿದೆ.

ಸೇತುವೆ ಮುಳುಗಡೆಯಿಂದಾಗಿ ಪ್ರಯಾಣಿಕರು ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸಬೇಕಿದೆ. ಇದರಿಂದಾಗಿ ರೈತರು, ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಹಾಗೂ ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಸೇತುವೆ ಬಳಿ ಕಂದಾಯ, ಪುರಸಭೆ, ಪೊಲೀಸ್ ಸಿಬ್ಬಂದಿ ನಿಗಾ ವಹಿಸಿದ್ದಾರೆ.

ನದಿ ಪಾತ್ರದ ಜನತೆ ನದಿಗೆ ಇಳಿಯದಂತೆ, ಪಂಪ್‌ಸೆಟ್ ಮೋಟಾರ್ ಬಿಚ್ಚುವ ನೆಪದಲ್ಲಿ ನದಿ ನೀರಲ್ಲಿ ಓಡಾಡಬಾರದು ಎಂದು ಡಂಗುರ ಸಾರಲಾಗಿದೆ. ಜಲಾವೃತಗೊಳ್ಳುವ ಮೀನುಗಾರ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಇಡಲಾಗಿದೆ.