ಕಂಪ್ಲಿ: ಪಟ್ಟಣದ ಎಪಿಎಂಸಿಯಲ್ಲಿ ಅಕ್ಕಿ ವ್ಯಾಪಾರಸ್ಥರ ಸಂಘಕ್ಕೆ ನಿವೇಶನ ನೀಡಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಟಿ.ಬದ್ರಿನಾಥ ಒತ್ತಾಯಿಸಿದರು.
ಪಟ್ಟಣದಲ್ಲಿ ಅಕ್ಕಿ ವ್ಯಾಪಾರಸ್ಥರ ಸಂಘದ ಸಂಘಟನಾ ಸಭೆಯಲ್ಲಿ ಭಾನುವಾರ ಮಾತನಾಡಿ, ಸರ್ಕಾರ ಎಪಿಎಂಸಿಗೆ ಚುನಾವಣೆ ನಡೆಸುವುದರೊಂದಿಗೆ ಕಾಯಂ ಕಾರ್ಯದರ್ಶಿಯನ್ನು ನೇಮಕಗೊಳಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಜಿ.ಕುಮಾರಸ್ವಾಮಿ ಮಾತನಾಡಿ, ಅಕ್ಕಿ ವ್ಯಾಪಾರಸ್ಥರಲ್ಲಿ ವ್ಯವಹಾರಿಕ ತೊಡಕುಗಳು ಉಂಟಾದಾಗ ವ್ಯಾಪಾರಸ್ಥರು ಸಂಘಟಿತರಾಗಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಎರಡನೇ ಬೆಳೆಗೆ ನೀರು ಒದಗಿಸುವುದರಿಂದ ರೈತರು, ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಈ ದಿಸೆಯಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದರು.
ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಬೇಸಿಗೆ ಬೆಳೆಗೆ ನೀರಿಗಾಗಿ ರೈತ ಸಂಘದವರು ನಡೆಸುವ ಪ್ರತಿಭಟನೆಗೆ ಅಕ್ಕಿ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಬೇಕು ಎಂದರು.
ವರ್ತಕರ ಸಂಘದ ಅಧ್ಯಕ್ಷ ಜಿ.ವಿ.ಸತ್ಯನಾರಾಯಣ, ಸಂಚಾಲಕ ಅಗಳಿ ಪಂಪಾಪತಿ, ಪದಾಧಿಕಾರಿಗಳಾದ ಬಿ.ಶೆಕ್ಷಾವಲಿ, ಕೆ.ಯಮನೂರಪ್ಪ, ಎಂ.ಬ್ರಹ್ಮಯ್ಯಬಾಬು, ವಿ.ರಾಮಲಿಂಗಯ್ಯ, ಜಿ.ಯಲ್ಲಪ್ಪ, ಪ್ರಮುಖರಾದ ಎಸ್.ಎಂ.ನಾಗರಾಜ, ಡಿ.ಶ್ರೀಧರ ಶ್ರೇಷ್ಠಿ, ಬಾಲ ವೆಂಕಟೇಶ, ಬಿ.ರವೀಂದ್ರನಾಥ ಶ್ರೇಷ್ಠಿ, ಎ.ತಾಯಣ್ಣ ಇತರರಿದ್ದರು.