ಹಲ್ಲೆಗೊಳಗಾದ ಗೀತಾ  
ಜಿಲ್ಲೆ

ಕಂಪ್ಯೂಟರ್ ಆಪರೇಟರ್‌ನಿಂದ ಮಹಿಳೆ ಮೇಲೆ ಹಲ್ಲೆ

ಅಭಿನಯ್ ಎಚ್.ಎಂ

ಹೊಳೆನರಸೀಪುರ: ತಾಲೂಕಿನ ಕೋಡಿಹಳ್ಳಿ ಗ್ರಾಮದ ಮಹಿಳೆ ಮೇಲೆ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಮಲ್ಲೇಶ್ ಮತ್ತು ಇತರರು ಶುಕ್ರವಾರ ಹರಿತವಾದ ಆಯುಧದಿಂದ ಹಲ್ಲೆ ಮಾಡಿರುವ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.

ಹಲ್ಲೆಗೊಳಗಾದ ಗೀತಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ: ತಮಗೆ ಸೇರಿದ ನಿವೇಶನದಲ್ಲಿ ಗೀತಾ-ಬೋರೆಗೌಡ ದಂಪತಿ ವರ್ಷದ ಹಿಂದೆ ಮನೆ ನಿರ್ಮಿಸಲು ಮುಂದಾಗಿದ್ದರು. ಈ ವೇಳೆ ಪಕ್ಕದ ಮನೆಯಲ್ಲಿ ವಾಸವಿದ್ದ ಮಲ್ಲೇಶ್ ಎಂಬುವರು ತಮಗೆ ಮೂರು ಅಡಿ ನಿವೇಶನ ಬರಬೇಕಿದೆ ಎಂದು ತಗಾದೆ ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಲೇರಿದಾಗ ನ್ಯಾಯಾಲಯವು ಬೋರೆಗೌಡ-ಗೀತಾ ಅವರ ಪರವಾದ ತೀರ್ಪು ನೀಡುವ ಮೂಲಕ ಪ್ರಕರಣವನ್ನು ವಜಾಗೊಳಿಸಿ ಕಟ್ಟಡವನ್ನು ಪೂರ್ಣಗೊಳಿಸುವಂತೆ ಆದೇಶಿಸಿತ್ತು.

ವರ್ಷದ ಬಳಿಕ ಮನೆ ಕೆಲಸ ಪ್ರಾರಂಭಿಸುವ ಸಲುವಾಗಿ ಕಾರ್ಪೆಂಟರ್ ಕಿಟಕಿ ಮತ್ತು ಬಾಗಿಲಿಗೆ ಅಳತೆ ತಗೆದುಕೊಳ್ಳಲು ಶುಕ್ರವಾರ ಸಂಜೆ ಹೋದ ಸಂದರ್ಭ ಮಲ್ಲೇಶ್, ಆತನ ತಂದೆ ರಂಗೇಗೌಡ, ತಾಯಿ ಪಾರ್ವತಮ್ಮ ಜಗಳ ತಗೆದಿದ್ದು, ಗೀತಾರ ಪತಿ ಬೋರೇಗೌಡ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಗೀತಾ ಅವರು ಅಡ್ಡ ಬಂದ ಕಾರಣ ಮೂಗಿನ ಬಳಿಗೆ ಚಾಕು ತಗುಲಿ ಗಾಯವಾಗಿದೆ.

ಘಟನೆ ನಂತರ ಪೊಲೀಸರು ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ಘಟನೆ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.