ವಿರಾಜಪೇಟೆ: ಕಂಪೇನಿಯನ್ಸ್ ಬಳಗ ವತಿಯಿಂದ ಡ್ರಗ್ಸ್ ಮುಕ್ತ ಭಾರತ ಅಭಿಯಾನದಡಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಮುಕ್ತ ಪುರುಷರ 5+2 ಕಾಲ್ಚೆಂಡು ಪಂದ್ಯಾವಳಿ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಫೈನಲ್ ಪಂದ್ಯಾಟವು ಸಿ.ಸಿ.ಬಿ. ಕೊಡಗು ಮತ್ತು ಕಂಪೇನಿಯನ್ಸ್ ತಂಡಗಳ ಮಧ್ಯೆ ನಡೆಯಿತು. 1-0 ಗೋಲುಗಳಿಂದ ಕಂಪೇನಿಯನ್ಸ್ ತಂಡ ಸಿ.ಸಿ.ಬಿ. ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಅತ್ಯಧಿಕ ಗೋಲು ಫಾರಿಸ್, ಉತ್ತಮ ಗೋಲು ಕೀಪರ್ ಕೆವಿನ್, ಪಂದ್ಯ ಪುರುಷೋತ್ತಮ ದರ್ಶನ್, ಭವಿಷ್ಯ ಆಟಗಾರ ಪಾಚೆ, ಉತ್ತಮ ಮುನ್ನಡೆ ಆಟಗಾರ ಸುಹೈಲ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ನೀಡಲಾಯಿತು.
ಕಂಪೇನಿಯನ್ಸ್ ಬಳಗ ವತಿಯಿಂದ ತಾಲೂಕು ಮೈದಾನದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಕೇರಳ, ತಮಿಳುನಾಡು ಮತ್ತು ಕರ್ನಾಟಕ ಹಾಗೂ ಜಿಲ್ಲೆಯ ಒಟ್ಟು 32 ತಂಡಗಳು ಭಾಗವಹಿಸಿದ್ದವು. ಪಂದ್ಯಾಟಗಳು ನಾಕೌಟ್ ಮಾದರಿಯಲ್ಲಿ ನಡೆದವು. ಅಂತಿಮ ಹಂತಕ್ಕೆ ನಾಲ್ಕು ತಂಡಗಳು ಆಯ್ಕೆಗೊಂಡಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯ ಯಂಗ್ ಇಂಡಿಯಾ ಪಾಲಿಬೆಟ್ಟ ಮತ್ತು ಕಂಪೇನಿಯನ್ಸ್ ತಂಡಗಳ ಮಧ್ಯೆ ನಡೆದು ಪೆನಾಲ್ಟಿ ಗೋಲ್ ಮೂಲಕ ಕಂಪೇನಿಯನ್ಸ್ ತಂಡ ವಿಜಯ ಸಾಧಿಸಿತು. ದ್ವೀತಿಯ ಸೆಮಿಫೈನಲ್ ಪಂದ್ಯವು ಸಿ.ಸಿ.ಬಿ. ಕೊಡಗು ಮತ್ತು ಕ್ಲಾಸಿಕ್ ಇಂಡಿಯಾ ಗೋಣಿಕೊಪ್ಪಲು ತಂಡಗಳ ಮದ್ಯೆ ನಡೆದು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಗೋಲ್ ಮೂಲಕ ಸಿ.ಸಿ.ಬಿ. ತಂಡ ಗೆಲುವು ಸಾಧಿಸಿತು.
ಸಮರೋಪ ಸಮಾರಂಭದಲ್ಲಿ ಮಾತನಾಡಿದ ವಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಅಫ್ ರೆಕಾರ್ಡ್ಸ್ ವಿಜೇತ ಕೇರಳದ ಮಲಪುರಂ ನಿವಾಸಿ ಎಂ.ಎನ್.ಉಮ್ಮರ್ ಮಾತನಾಡಿ, ಯುವಕರಲ್ಲಿ ಪ್ರಸ್ತುತವಾಗಿ ಮಾದಕ ವಸ್ತುಗಳ ಉಪಯೋಗ ಹೆಚ್ಚಾಗುತ್ತಿದ್ದು ಇದರಿಂದ ಕುಟುಂಬಗಳು ಬೀದಿಪಾಲಾಗುತ್ತಿವೆ. ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಾ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತಿದೆ. ಸಮಾಜ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮಾದಕ ವಸ್ತುಗಳ ವಿರುದ್ಧ ಹೋರಾಡುವ ಅನಿವಾರ್ಯ ಇದೆ ಎಂದರು.
ಸ್ಟೂಡೆಂಟ್ ಕೌನ್ಸಿಲ್ ಆಫ್ ಇಂಡಿಯಾ ಕೊಡಗು ನಿರ್ದೇಶಕ ಸುಹಾನ್ ಕಬೀರ್ ಮಾತನಾಡಿ, ಯುವ ಸಮೂಹ ದಿಕ್ಕು ದಿಸೆಯಿಲ್ಲದೆ ಸಾಗುತ್ತಿದೆ. ಸಮಾಜಕ್ಕೆ ಮಾರಕವಾಗಿ ಪರಿಣಮಿಸುವ ಕಾರ್ಯಕ್ಕೆ ಎಂದಿಗೂ ಮುಂದಾಗಬಾರದು ಎಂದು ಹೇಳಿದರು.
ಸಾಮಾಜಿಕ ಜಾಲತಾಣದ ಪ್ರಮೋಟರ್ ಮಿಶ್ರೀಯ ಕೆ.ವೈ., ನಿವೃತ್ತ ಶಿಕ್ಷಕ ವಿಜಯನ್ ಸಿದ್ದಾಪುರ, ಉದ್ಯಮಿ ಸಿ.ಎ.ರಾಸಿಕ್, ಪುರಸಭೆ ಸದಸ್ಯರಾದ ಮೊಹಮ್ಮದ್ ರಾಫಿ, ಎಚ್.ಎಸ್.ಮತೀನ್ ಇದ್ದರು.