ಜಿ.ನಾಗರಾಜ್ ಬೂದಿಕೋಟೆ
ಕೋಲಾರ ಜಿಲ್ಲೆಯ ಮೂರು ತಾಲೂಕಿನ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಾದ ಯರಗೋಳ್ ಡ್ಯಾಂನ ನೀರು ಕಂದುಬಣ್ಣದಲ್ಲಿ ಸರಬರಾಜು ಆಗುತ್ತಿರುವ ಕಾರಣ ನೀರನ್ನು ಬಳಸುವ ಪಟ್ಟಣ ವಾಸಿಗಳಲ್ಲಿ ಆತಂಕ ಉಂಟಾಗಿದೆ.
ಕಳೆದ ವರ್ಷ ನವಂಬರ್ನಲ್ಲಿ ಯರಗೋಳ್ ಡ್ಯಾಂಅನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಜನತೆಗೆ ಆನಂದಗಿರಿ ಬಳಿಯ ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಅಂದಿನಿಂದ ಡ್ಯಾಂನ ನೀರನ್ನು ವಾರಕ್ಕೆ ಮೂರು ದಿನ ಪಟ್ಟಣದ ಜನತೆಗೆ ಪುರಸಭೆ ಮೂಲಕ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತದೆ. ಯೋಜನೆಯಿಂದ ನೀರು ಪೂರೈಕೆ ಆಗುತ್ತಿರುವ ಕಾರಣ ನೀರಿನ ಭವಣೆ ಸಹ ನೀಗಿದೆ. ಆದರೆ ಯರಗೋಳ್ ನೀರು ಮೇಲ್ನೋಟಕ್ಕೆ ನೋಡಲು ಯಾವುದೇ ಕಲುಷಿತವಾಗಿರದಂತೆ ಕಾಣುತ್ತದೆ. ಆದರೆ ಬಕೆಟ್ ಅಥವಾ ಬಿಂದಿಗೆಗಳಲ್ಲಿ ಸಂಗ್ರಹಿಸಿದಾಗ ನೀರು ಕಂದು ಬಣ್ಣ ಇರುವುದು ಕಾಣುತ್ತದೆ. ಆದರಿಂದ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಜತೆಗೆ ನೀರಿನಿಂದ ಸಂಪ್, ಸಿಂಟ್ಯಾಕ್ಸ್ ಸಹ ಕಂದು ಬಣ್ಣಕ್ಕೆ ಒಳಗಾಗುತ್ತಿದೆ. ಇಷ್ಟಲ್ಲದೆ ಮನೆಗಳಲ್ಲಿರುವ ವಾಟರ್ ಫಿಲ್ಟರ್ಗಳು ಯರಗೋಳ್ ನೀರು ಪೂರೈಕೆಯಾಗುತ್ತಿದ್ದಾಗಿನಿಂದ ಎರಡು ತಿಂಗಳಿಗೊಮ್ಮೆ ಕೆಡುವಂತಾಗಿದೆ ಎಂಬುದು ಅನೇಕ ನಾಗರಿಕರ ಆರೋಪವಾಗಿದೆ. ಇದರ ಬಗ್ಗೆ ನಾಗರಿಕರು ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದ್ದರೂ, ಯಾವುದೇ ಸಮಸ್ಯೆಯಿಲ್ಲ. ಪ್ರಾರಂಭದಲ್ಲಿ ಹೊಸ ನೀರು ಹಾಗೆ
ಬರುತ್ತದೆ, ನಂತರ ಎಲ್ಲವೂ ಸರಿಹೋಗಲಿದೆ ಎಂದು ಸಮಜಾಯಿಷಿ ನೀಡಿದ್ದರು.
ಆದರೆಯರಗೋಳ್ ಮತ್ತು ಬೋರ್ವೆಲ್ ನೀರನ್ನು ಮಿಶ್ರಣ ಮಾಡಿ ಸರಬರಾಜು ಮಾಡಿದಾಗ ಯಾವುದೇ ಸಮಸ್ಯೆ ಕಂಡಿರಲಿಲ್ಲ ಎನ್ನಲಾಗಿದೆ.
ಪಟ್ಟಣದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬುವವರ ಮನೆಗೆ ಪೂರೈಕೆಯಾದ ನೀರು ಕಂದು ಬಣ್ಣದಲ್ಲಿರುವುದನ್ನು ಕಂಡು ವರದಿಗಾರರಿಗೆ ತಿಳಿಸಿದ್ದಾರೆ. ಇದರಂತೆ ಪಟ್ಟಣದ ಎಲ್ಲ ಮನೆಗಳಿಗೂ ನೀರು ಸರಬರಾಜು ಆಗುತ್ತಿದೆಯಾದರೂ ಯಾರೂ ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ. ಮಂಜುನಾಥ್ ಯರಗೋಳ್ ನೀರಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಶುದ್ಧೀಕರಿಸಿದರೂ ಯಾಕೆ ನೀರು ಈ ರೀತಿ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿದ ಬಳಿಕ ಅನೇಕ ನಾಗರಿಕರು ನಮ್ಮದೂ ಇದೇ ಸಮಸ್ಯೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಯರಗೋಳ್ ನೀರಿನ ಕುರಿತು ನಾಗರಿಕರಲ್ಲಿ ಮೂಡಿರುವ ಹಲವು ಸಂಶಯಗಳಿಗೆ ಪೂರಕ ಎಂಬಂತೆ ಪುರಸಭೆ ಎಚ್ಚೆತ್ತುಕೊಂಡು ಸೂಕ್ತ ಕ್ರಮದಲ್ಲಿ ನೀರನ್ನು ಶುದ್ಧಿಕರಿಸಿ ಪೂರೈಕೆ ಮಾಡಿ ಎಲ್ಲ ಗೊಂದಲಗಳನ್ನು ನಿವಾರಿಸಬೇಕು. ಜತೆಗೆ ನೀರಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ಒತ್ತಾಯ.
ನೀರು ಕಂದು ಬಣ್ಣದಲ್ಲಿ ಕಂಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೆಯುಡಬ್ಲುಎಸ್ಡಿ ಅಧಿಕಾರಿಗಳ ಜತೆಗೆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸ ಲಾಗಿದೆ. ಟ್ಯಾಂಕ್ನಿಂದ ಪೂರೈಕೆ ಮಾಡುತ್ತಿರುವ ನೀರಿನಲ್ಲಿ ಯಾವುದೇ ಲೋಪದೋಷವಿಲ್ಲ ಎಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನೀರಿನಲ್ಲಿ ಕೆಲವು ರಾಸಾಯನಿಕ ಅಂಶಗಳನ್ನು ಬಳಸುವುದರಿಂದ ಇಂತಹ ಸಮಸ್ಯೆ ಕಂಡು ಬರುತ್ತದೆ. ಮುಂದೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.
| ಸತ್ಯನಾರಾಯಣ ಮುಖ್ಯಾಧಿಕಾರಿ ಪುರಸಭೆ
ಪುರಸಭೆ ಮೂಲಕ ಪೂರೈಕೆ ಮಾಡುತ್ತಿರುವ ಯರಗೋಳ್ ಡ್ಯಾಂನ ನೀರು ಕಂದುಬಣ್ಣದಿಂದ ಕೂಡಿದ್ದು, ಬಳಸಲು ಹಿಂಜರಿಯುಂತಾಗಿದೆ. ಆದ್ದರಿಂದ ನೀರಿನ ಶುದ್ಧೀಕರಣದ ಬಗ್ಗೆ ಪುರಸಭೆ ಸೇರಿ ಇತರ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಗುಣಮಟ್ಟದ ನೀರನ್ನು ಪುರಸಭೆ ಪೂರೈಕೆ ಮಾಡಬೇಕು.
| ಕೆ.ಜಿ ಮಂಜುನಾಥ ಬಂಗಾರಪೇಟೆ ನಿವಾಸಿ