ಜಿಲ್ಲೆ

ಕಂದಾಯ ಸಚಿವರೊಂದಿಗೆ ಬೇಡಿಕೆಗಳ ಚರ್ಚೆ

ಸಂಡೂರು: ಕೆಲಸಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಸಿಲ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ನಡೆದಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶಾಸಕಿ ಅನ್ನಪೂರ್ಣ ತುಕಾರಾಮ್ ಸೋಮವಾರ ಭೇಟಿ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ರಾಜೇಶ್ ಮಾತನಾಡಿ, 2024ರ ಸೆ.26ರಿಂದ ಅ.3ರವರೆಗೆ ಧರಣಿ ನಡೆಸಿದಾಗ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ. 17ಕ್ಕೂ ಹೆಚ್ಚು ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ಕಾರ್ಯನಿರ್ವಹಣೆಗೆ ಕಟ್ಟಡ, ಟೇಬಲ್, ಕುರ್ಚಿ, ಅಲ್ಮರಾ, ಪ್ರಿಂಟರ್, ಸ್ಕ್ಯಾನರ್, ಮೊಬೈಲ್ ಫೋನ್ ನೀಡಿಲ್ಲ. ಕರ್ತವ್ಯದ ವೇಳೆ ಮೃತರಾಗುವ ನೌಕರರ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಮಸ್ಯೆಗಳ ಕುರಿತು ಕಂದಾಯ ಸಚಿವರೊಂದಿಗೆ ಮಾತನಾಡುತ್ತೇನೆ ಹಾಗೂ ಸದನದಲ್ಲಿ ಈ ಕುರಿತು ಪ್ರಸ್ತಾಪಿಸುವೆ ಎಂದು ಶಾಸಕ ಅನ್ನಪೂರ್ಣ ತುಕಾರಾಮ್ ತಿಳಿಸಿದರು.