ಜಿಲ್ಲೆ

ಕಂದಾಯ ಭೂಮಿ ಒತ್ತುವರಿ ತೆರವಿಗೆ ಆರ್‌ಸಿ ತಾಕೀತು

ಚಿತ್ರದುರ್ಗ: ಲ್ಯಾಂಡ್ ಬೀಟ್ ಮೂಲಕ ಕಂದಾಯ ಇಲಾಖೆ ಭೂಮಿ ಸಮೀಕ್ಷೆ ನಡೆಸಿ,ಅನಧಿಕೃತ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾ ಉಸ್ತು ವಾರಿ ಕಾರ‌್ಯದರ್ಶಿ,ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ವಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಕಂದಾಯ ಇಲಾಖೆ ವಿಷಯಗಳ ಕುರಿತು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು,ವಿವಿಧ ಇಲಾಖೆಗಳ ಕಚೇರಿಗಳ ನಿರ್ಮಾಣಕ್ಕೆ ಕಂದಾಯ ಭೂಮಿ ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ ಸಾಕಷ್ಟು ಅರ್ಜಿಗಳು ಜಿಲ್ಲಾಧಿಕಾರಿಗಳ ಮುಂದಿವೆ. ಪೊಲೀಸ್,ಶಿಕ್ಷಣ,ಆರೋಗ್ಯ ಇಲಾಖೆಗಳಿಗೆ ನಗರಕ್ಕೆ ಹತ್ತಿರದಲ್ಲೇ ನಿವೇಶನ ಮಂಜೂರು ಮಾಡಬೇಕು. ಜಿಲ್ಲಾಧಿ ಕಾರಿಗಳು ಭೂ ಒತ್ತುವರಿ ತೆರವು ಮಾಡಿ,ಅಗತ್ಯವಿರುವ ಕಡೆ ಸಂಬಂಧಿಸಿದ ಇಲಾಖೆಗಳಿಗೆ ಭೂಮಿ ನೀಡಲು ಮುಂದಾಗಬೇಕೆಂದರು.

ಫಾರಂ 53 ಹಾಗೂ 57 ಅಡಿ ಉಳುಮೆ ಮಾಡುತ್ತಿರುವ ಹಾಗೂ ಜಮೀನು ಮಂಜೂರು ಮಾಡಲು ಕೋರಿರುವ ಅರ್ಜಿಗಳ ಅಂಕಿ ಅಂಶಗಳ ಮಾಹಿತಿ ಜಿಲ್ಲಾಧಿಕಾರಿಗಳಿಂದ ಪಡೆದು,ಗೋಮಾಳದ ಜಾಗವನ್ನು ಸಾರ್ವಜನಿಕರ ಬಳಕೆಗೆ ಮಂಜೂರು ಮಾಡಬಹುದು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾವಲು ಭೂಮಿಯನ್ನು ಮಂಜೂರು ಮಾಡದಂತೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಇದರ ಜತೆಗೆ ಕರ್ನಾಟಕ ಕ್ರಿಕೆಟ್ ಕ್ಲಬ್ ಸೇರಿದಂತೆ ಖಾಸಗಿಯವರಿಗೆ ವಿವಿಧ ಉದ್ದೇಶಗಳಿಗಾಗಿ ನೀಡಿದ ಭೂಮಿ ಬಳಕೆಯಾಗದಿದ್ದರೆ ಅಂತಹ ಕಂದಾಯ ಭೂಮಿಗಳ ವಿವರವನ್ನು ಪಟ್ಟಿ ಮಾಡಿ ತಮ್ಮ ಕಚೇರಿಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು. ವಿವಿಧ ಜಿಲ್ಲೆಗಳಲ್ಲಿನ ಭೂ ಸ್ವಾಧೀನ ಮಾಹಿತಿಯನ್ನು ಗಣಕೀಕರಣಕ್ಕಾಗಿ ಹೊಸ ತಂತ್ರಾಂಶ ಅಭಿವೃದ್ಧಿಗೆ ಸರ್ಕಾರ ಚಿಂತಿಸಿದೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ,ಜಿಲ್ಲೆಯಲ್ಲಿ ಈವರೆಗೆ ಆದ ಮಳೆ ಹಾಗೂ ಹಾನಿ ವಿವರ ನೀಡಿದರು. 11 ಜಾನುವಾರುಗಳು ಮೃತ ಪಟ್ಟಿವೆ. 148 ಮನೆಗಳು ಹಾನಿಯಾಗಿವೆ. ಸಂತ್ರಸ್ತರಿಗೆ ಪರಿಹಾರ ವಿತರಣೆಗೆಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಶೇ.94ಲ್ಯಾಂಡ್ ಬೀಟ್ ಆಗಿದೆ. ಕಾವಲು ಪ್ರದೇಶಗಳ ಮ್ಯಾಪಿಂಗ್‌ಗೆ ಅಡ್ಡಿಯಾಗಿದ್ದ ತಾಂತ್ರಿಕ ಸಮಸ್ಯೆ ನಿವಾರಿಸಿ ಲ್ಯಾಂಡ್‌ಬೀಟ್ ಮುಂದುವರಿಸಲಾಗಿದೆ. ಫಾರಂ 53 ಹಾಗೂ 57 ಅಡಿ ಜಿಲ್ಲೆಯಲ್ಲಿ 76 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು. ಎಡಿಸಿ ಬಿ.ಟಿ.ಕುಮಾರ ಸ್ವಾಮಿ,ಡಿಡಿಎಲ್‌ಆರ್ ರಾಮಾಂಜನೇಯ ಇತರರು ಇದ್ದರು.

(ಸಿಟಿಡಿ 29 ಆರ್‌ಸಿ-ವಿಸಿ)

ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಗುರುವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಚಿತ್ರದುರ್ಗ ಡಿಸಿ ಟಿ.ವೆಂಕಟೇಶ್,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಡಿಡಿಎಲ್‌ಆರ್ ರಾಮಾಂಜನೇಯ ಇದ್ದರು.

------------------