ಸಾಗರ: ಭೂ ಚಳವಳಿ ನಡೆಸಿ ಉಳುವವನೇ ಹೊಲದೊಡೆಯ ಕಾನೂನು ಸಮರ್ಥವಾಗಿ ಜಾರಿಗೆ ತರುವಲ್ಲಿ ನಾವು ಶ್ರಮಿಸಿದ್ದೇವೆ. ಆದರೆ ರಾಜ್ಯ ಸರ್ಕಾರ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವುದು ಅವೈಜ್ಞಾನಿಕ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದ ಗಾಂಧಿ ಮಂದಿರದಲ್ಲಿ ಶುಕ್ರವಾರ ನಗರ ಕಾಂಗ್ರೆಸ್ ಘಟಕ ಏರ್ಪಡಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ರೈತರ ಹಕ್ಕು ಕಸಿದುಕೊಳ್ಳುವ ಕಾಯ್ದೆ. ಸರ್ಕಾರ ತನ್ನ ಧೋರಣೆ ಬದಲಿಸಿಕೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ದೇಶದಲ್ಲಿ ಸಾಮಾಜಿಕ ನ್ಯಾಯ ನೀಡಿದ ಏಕೈಕ ಪಕ್ಷ ಕಾಂಗ್ರೆಸ್. 1962ರಲ್ಲಿ ಭೂ ಸುಧಾರಣೆಗೆ ತಿದ್ದುಪಡಿ ಬಂದರೂ, 1972ರವರೆಗೆ ಉಳುವವನಿಗೆ ಹೊಲದ ಅಧಿಕಾರ ದೊರೆತಿರಲಿಲ್ಲ. ಅದನ್ನು ಕೊಡಿಸುವ ಹೋರಾಟ ಆರಂಭವಾದದ್ದೇ ಈ ನೆಲದಿಂದ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಹಸಿದವರಿಗೆ ಅನ್ನ, ದುಡಿಯುವ ಕೈಗಳಿಗೆ ಉದ್ಯೋಗ ಕೊಡುವುದು ಕಾಂಗ್ರೆಸ್ ಧ್ಯೇಯ. ಕೇಂದ್ರ ಸರ್ಕಾರ ಬಡವರು, ಕೂಲಿಕಾರರು, ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಗಣಪತಿ ಕೆರೆ ಅಭಿವೃದ್ಧಿ ಮಾಡಿದ ಮಾತ್ರಕ್ಕೆ ಸಾಗರ ಕ್ಷೇತ್ರದ ಅಭಿವೃದ್ಧಿಯಾಗಿದೆ ಎಂದು ಶಾಸಕರು ಭಾವಿಸಿಕೊಂಡಂತಿದೆ. ಮೊದಲು ಬಗರ್ಹುಕುಂ, ಅರಣ್ಯ ಹಕ್ಕು ಕಾಯ್ದೆ ಸೇರಿ ವಿವಿಧ ಯೋಜನೆಯಲ್ಲಿ ಅರ್ಹರಿಗೆ ಭೂಮಿ ಕೊಡಿಸುವ ಕೆಲಸ ಮಾಡಲಿ ಎಂದರು.
ಸಾಗರ ನಗರ ಘಟಕದ ಅಧ್ಯಕ್ಷ ಐ.ಎನ್.ಸುರೇಶ್ಬಾಬು ಮಾತನಾಡಿ, ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲಾಗುತ್ತದೆ. ಸಂಘಟನೆ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರ ಪಡೆದು ಪಕ್ಷ ಕಟ್ಟಲಾಗುವುದು.
ಸಾಗರ ನಗರ ಘಟಕದ ನೂತನ ಅಧ್ಯಕ್ಷರಾಗಿ ಐ.ಎನ್.ಸುರೇಶ್ಬಾಬು ಅಧಿಕಾರ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷ ತಸ್ರೀಫ್ ಅವರನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಅನಿತಾಕುಮಾರಿ, ಭೀಮನೇರಿ ಶಿವಪ್ಪ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಎಲ್.ಟಿ.ತಿಮ್ಮಪ್ಪ, ಬಿ.ತುಕಾರಾಮ್ ಮಕ್ಬೂಲ್ ಸಾಬ್, ಕೆ.ಹೊಳೆಯಪ್ಪ, ತೀ.ನ.ಶ್ರೀನಿವಾಸ್, ಮಧುಮಾಲತಿ, ಮಹಾಬಲ ಕೌತಿ. ನಾಗೇಂದ್ರ ಎಸ್.ಕುಮಟಾ, ಉಮೇಶ್, ಪ್ರೇಮ್ಂಗ್, ಅಬ್ದುಲ್ ಹಮೀದ್, ಮೈಕಲ್ ಡಿಸೋಜ, ವಿ.ಶಂಕರ್, ಅನ್ವರ್ ಭಾಷಾ, ಪ್ರವೀಣ ಬಣಕಾರ್ ಇದ್ದರು.