ಬೇಲೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್ ಪೌತಿ ಖಾತೆ ಹಾಗೂ ಹಕ್ಕು ಪತ್ರ ವಿತರಿಸಿದರು. ಎಂ.ಮಮತಾ, ಅಶೋಕ್ ಕುಮಾರ್, ಭೋಜೇಂದ್ರಪ್ಪ ಇತರರು ಇದ್ದರು. 
ಜಿಲ್ಲೆ

ಕಂದಾಯ ಇಲಾಖೆಯಿಂದ ಮಾದರಿ ಆಡಳಿತ

ಬೇಲೂರು: ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ತಾಲೂಕಿನ ಎಲ್ಲ ಮನೆ-ಮನೆಗಳಿಗೂ ತೆರಳಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಆಡಳಿತ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಹಾಗೂ 94/ಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗುವ ಇಲಾಖೆಯಾಗಿದೆ. ಇಲ್ಲಿ ಸಾರ್ವಜನಿಕರು ಮಧ್ಯವರ್ತಿಗಳಿಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇರವಾಗಿ ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳಬೇಕಿದೆ ಎಂದರು.

ಈಗಾಗಲೇ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಪ್ರತಿ ಗ್ರಾಮಕ್ಕೆ ತೆರಳಿ ಕಂದಾಯ ಇಲಾಖೆಗೆ ಸೇರಿದ ದಾಖಲಾತಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನೀಡುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿ ಆಡಳಿತ ನೀಡುತಿದ್ದಾರೆ. ಅಲ್ಲದೆ ಬಗರ್‌ಹುಕುಂ ಸಾಗುವಳಿ ಸಮಿತಿಯು ಸದ್ಯದಲ್ಲೇ ರಚನೆಯಾಗಲಿದ್ದು, ಈಗಿರುವ ಸಾವಿರಾರು ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸೌಲಭ್ಯಗಳು ಸಾರ್ವಜನಿಕರಿಗೆ ಸುಲಲಿತವಾಗಿ ಸಿಗುವಂತೆ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಅದಾಲತ್ ಯೋಜನೆ ಮೂಲಕ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಈಗ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಜನರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಸಹವಾಸ ಮಾಡದೆ, ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ದಾಖಲೆಗಳನ್ನು ಪಡೆಯಬೇಕು. ಇಂದು 63 ಫಲಾನುಭವಿಗಳಿಗೆ ದಾಖಲಾತಿ ಹಾಗೂ 51 ಹಕ್ಕುಪತ್ರ ಸೇರಿದಂತೆ ವಿವಿಧ ದಾಖಲೆ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್, ಉಪ ತಹಸೀಲ್ದಾರ್ ಭೋಜೇಂದ್ರಪ್ಪ, ಶಿರಸ್ತೇದಾರ್ ರಂಗಸ್ವಾಮಿ, ವಿಎ ಹನುಮಂತು, ಕೋಗಿಲೆಮನೆ ಗ್ರಾಪಂ ಅಧ್ಯಕ್ಷ ಶೇಷೇಗೌಡ ಇತರರು ಇದ್ದರು.