ಜಿಲ್ಲೆ

ಕಂದಾಯ ಇಲಾಖೆ ಹೊರಡಿಸಿರುವ ಸುತ್ತೋಲೆ ರೈತರಿಗೆ ಕಂಟಕ

ಹಾಸನ: ಬಗರ್ ಹುಕುಂ ಸಾಗುವಳಿದಾರರಿಗೆ ವರ್ಷದ ಹಿಂದೆ ಕಂದಾಯ ಇಲಾಖೆ ಹೊರಡಿಸಿರುವ ಸುತ್ತೋಲೆ ಕಂಟಕವಾಗಿದ್ದು, ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ತಮ್ಮದೇ ಸರ್ಕಾರವನ್ನು ಒತ್ತಾಯಿಸಿದರು.

ಬೇಲೂರು ತಾಲೂಕೊಂದರಲ್ಲೇ ನಮೂನೆ 53ರ ಅಡಿಯಲ್ಲಿ 4115 ಹಾಗೂ 57ರಲ್ಲಿ 14,229 ಸೇರಿ ಒಟ್ಟು 18,344 ಅರ್ಜಿ ಸಲ್ಲಿಕೆಯಾಗಿವೆ. ವರ್ಷದ ಅವಧಿಯಲ್ಲಿ ಬಗರ್ ಹುಕುಂ ಸಮಿತಿಯ 10 ಸಭೆ ಆಗಿದ್ದರೂ, 4115 ಅರ್ಜಿಗಳಲ್ಲಿ ಕೇವಲ 196ಕ್ಕೆ ಮಾತ್ರ ಮಂಜೂರಾತಿ ನೀಡಿ, 3359 ಅರ್ಜಿಗಳನ್ನು ವಜಾ ಮಾಡಲಾಗಿದೆ. ಹಾಗೆಯೇ 14,229 ಅರ್ಜಿಗಳಲ್ಲಿ 353ನ್ನು ಮಾನ್ಯ ಮಾಡಿ, 7,179 ಅರ್ಜಿಗಳನ್ನು ಡಿಸಿ ಅವರು ವಜಾ ಮಾಡಿದ್ದಾರೆ. ಹಿಂದು ಮುಂದು ಪರಿಶೀಲಿಸದೇ ಶೇ.90 ರಷ್ಟು ಅರ್ಜಿಗಳನ್ನು ವಜಾ ಮಾಡಿದರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ರೈತರ ಪರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದೇನೆ. ಸರ್ಕಾರದ ನಿಲುವು ಸರಿಯಲ್ಲ. ಕೂಡಲೇ ತಿದ್ದುಪಡಿ ಮಾಡುವ ಮೂಲಕ ಬಗರ್ ಹುಕುಂ ಸಮಿತಿಗೆ ಈ ಹಿಂದೆ ಇದ್ದ ಅಧಿಕಾರವನ್ನು ಮರುಸ್ಥಾಪಿಸಬೇಕು.ಬರುವ ಡಿಸೆಂಬರ್ 25 ರೊಳಗೆ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಸನ್ಮಾನ ಮಾಡಲಾಗುವುದು ಎಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಶಸ್ತಿ ಪಡೆಯುವ ಕಾರಣಕ್ಕೋ ಏನೋ ಆತುರಾತುರದಲ್ಲಿ ಬಗರ್ ಹುಕುಂ ಅಡಿ ಸಲ್ಲಿಸಿದ ಅರ್ಜಿಗಳ ಪೈಕಿ ಹೆಚ್ಚನ್ನು ವಜಾ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಅಧಿಕಾರ ಮೊಟಕು:

ಈ ಹಿಂದೆ ಸಮಿತಿಗೆ ಅಧಿಕಾರ ನೀಡಲಾಗಿತ್ತು. ಅಲ್ಲಿ ತಿರಸ್ಕೃತ ಆದ ಅರ್ಜಿಗಳ ಬಗ್ಗೆ ಡಿಸಿ ಸೇರಿದಂತೆ ಸಂಬಂಧಪಟ್ಟ ಅಧಿಕಾರ ಮುಂದೆ ಪ್ರಶ್ನೆ ಮಾಡಬಹುದಿತ್ತು. ಆದರೀಗ ಭೂಮಿ ಮಂಜೂರಾತಿಗೆ ಸಮಿತಿಗೆ ಇದ್ದ ಅಧಿಕಾರ ಮೊಟಕುಗೊಳಿಸಿ, ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಧಿಕಾರಿಗಳಿಂದ ವಜಾ ಆದ್ರೆ ನ್ಯಾಯಕ್ಕಾಗಿ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕಿದೆ. ರೈತರಿಗೆ ಅದು ಸಾಧ್ಯವೇ ಎಂದು ಹೇಳಿದರು. ಈಬಗ್ಗೆ ಏನೂ ಹೇಳಲಾಗದ ಸ್ಥಿತಿಯಲ್ಲಿ ರೈತರಿದ್ದು, ಪ್ರತಿಭಟನೆಯೊಂದೇ ಮಾರ್ಗ ಎಂದು ಎಚ್ಚರಿಸಿದರು.

ಶಾಸಕರಿಗೂ ಗೊತ್ತಿಲ್ಲ: ಈ ಬಗ್ಗೆ ಸಂಬಂಧಪಟ್ಟ ಶಾಸಕರಿಗೆ, ಸಚಿವರಿಗೆ ಗೊತ್ತಿಲ್ಲವೇನೋ, ಈವರೆಗೂ ಯಾರೊಬ್ಬರೂ ಮಾತನಾಡಿಲ್ಲ. ಆದರೆ ಸಣ್ಣ ಸಣ್ಣ ರೈತರಿಗೆ ಸಂಕಷ್ಟ ಎದುರಾಗಿದೆ ಎಂದರು. ಅರ್ಜಿ ಹಾಕುವ ಮೊದಲೇ ರೈತರಿಗೆ ಸೂಚನೆ ಕೊಡಬೇಕಿತ್ತು. ಅದಾವುದನ್ನೂ ಮಾಡದೇ ವಜಾ ಮಾಡುವುದು ಎಷ್ಟು ಸರಿ ಎಂದು ಕೇಳಿದರು.

ಅಧಿವೇಶನದಲ್ಲಿ ಚರ್ಚಿಸಿ: ಹಾಗಾಗಿ ಡಿಸಿ ಅವರು ಅಕ್ರಮ-ಸಕ್ರಮ ಅರ್ಜಿಗಳನ್ನು ಅನೇಕ ಕಾರಣ ನೀಡಿ ವಜಾ ಮಾಡಿದ್ದರೂ, ಮತ್ತೊಮ್ಮೆ ಮರು ಪರಿಶೀಲಿಸುವುದು ಒಳಿತು ಎಂದು ಮನವಿ ಮಾಡಿದರು. ಹಾಗೆಯೇ ಶಾಸಕರು ಬೆಳಗಾವಿ ಅಧಿವೇಶನದಲ್ಲಾದರೂ ಪ್ರಶ್ನಿಸಿ ಎಂದು ಸಲಹೆ ನೀಡಿದರು.

ಒಟ್ಟಿನಲ್ಲಿ 2023 ಡಿ.1 ರಂದು ಸರ್ಕಾರ ಹೊರಡಿಸಿರುವ ಹೊಸ ಆದೇಶ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣವಾಗಿದ್ದು, ಇದು ರೈತರಿಗೆ ಮಾರಕವಾಗಿದೆ. ಸ್ಥಳೀಯ ಶಾಸಕರನ್ನು ಕೇಳದೆಯೇ ಡಿಸಿ ಅವರು ಅರ್ಜಿ ವಜಾ ಮಾಡಬಹುದು. ಹಾಗಾಗಿ ತಿದ್ದುಪಡಿ ಮಾಡಿ, ಬಗರ್‌ಹುಕುಂ ಸಮಿತಿಗೆ ಮರು ಅಧಿಕಾರ ಕೊಡಬೇಕು ಎಂದು ಶಿವರಾಂ ಒತ್ತಾಯಿಸಿದರು. ಏಕೆಂದರೆ ಇದು ಬೇಲೂರು ಸಮಸ್ಯೆ ಮಾತ್ರ ಅಲ್ಲ, ಇಡೀ ರಾಜ್ಯದ ಸಮಸ್ಯೆಯಾಗಿದೆ ಎಂದರು.

2005 ರ ಮುಂಚೆ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಪ್ಲಾಂಟರ್ಸ್‌ಗಳಿಗೆ ಅದೇ ಜಾಗವನ್ನು ಗುತ್ತಿಗೆ ನೀಡಲು ಸರ್ಕಾರ ಅರ್ಜಿ ಆಹ್ವಾನಿಸಿದೆ. ಆದರೆ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದ ರೈತರಿಗೆ ವಜಾ ಶಿಕ್ಷೆ ನೀಡುವುದು ಎಷ್ಟು ಸರಿ. ಬಡ ರೈತರಿಗೆ ಭೂಮಿ ಮಂಜೂರು ಮಾಡಿಕೊಡಿ ಎಂದು ಶಿವರಾಂ ಮನವಿ ಮಾಡಿದರು. ಬಡ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯದೆ ಇದ್ದರೆ, ಹೋರಾಟಕ್ಕೂ ಸಿದ್ಧ ಎಂದರು.