ಕಸ್ತೂರಿರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್. ವಿಜಯಕುಮಾರ್ 
ಜಿಲ್ಲೆ

ಕಂದಾಯ ಇಲಾಖೆ ನಿಯಮಗಳಿಂದ ರೈತರಿಗೆ ಸಂಕಷ್ಟ

ಚಿಕ್ಕಮಗಳೂರು: ಕಂದಾಯ ಇಲಾಖೆಯಲ್ಲಿನ ಕೆಲವು ನಿಯಮದಿಂದಾಗಿ ರೈತರು ಪರದಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಹೋರಾಟಗಾರರು ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಕಸ್ತೂರಿರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್. ವಿಜಯಕುಮಾರ್ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಫಾರಂ ನಂಬರ್ ೫೦ ಹಾಗೂ ೫೩ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಖುಷ್ಕಿ ಅಲ್ಲದೇ ಕಾಫಿ ಹಾಗೂ ತೋಟಗಾರಿಕೆ ಬೆಳೆಗಳ ಭೂಮಿಗೆ ಹಕ್ಕುಪತ್ರ ನೀಡಲಾಗುತ್ತಿತ್ತು. ಆದರೆ, ಇದೇ ಪ್ರದೇಶದಲ್ಲಿ ಫಾರಂ ನಂಬರ್ ೫೭ರಡಿ ಸಲ್ಲಿಸಿರುವ ಅರ್ಜಿಗಳನ್ನು ಗೌಪ್ಯವಾಗಿ ವಜಾ ಮಾಡಲಾಗುತ್ತಿದೆ. ಇದು ಮುಂದುವರೆದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಂದಾಯ ಕಾಯ್ದೆ ಪ್ರಕಾರ ಭೂಮಿ ಮಂಜೂರು ಮಾಡಲು ನಗರಸಭೆ ವ್ಯಾಪ್ತಿಯಿಂದ ೫ ಕಿ.ಮೀ. ಪುರಸಭಾ ವ್ಯಾಪ್ತಿಯಿಂದ ೩ ಕಿ.ಮೀ. ಹಾಗೂ ನಗರಪಾಲಿಕೆ ವ್ಯಾಪ್ತಿಯಿಂದ ೧೦ ಕಿ.ಮೀ. ಎಂಬ ನಿಬಂಧನೆ ವಿಧಿಸಲಾಗಿತ್ತು. ಇದು, ಗಾಳಿ ಮಾರ್ಗವೋ ಅಥವಾ ಭೂ ಮಾರ್ಗವೋ ಎಂಬ ನಿಖರವಾದ ಮಾಹಿತಿ ನೀಡಿಲ್ಲ ಎಂದರು.

ಭೂ ಮಾರ್ಗವಾಗಿ ಸುಮಾರು ೧೫ ರಿಂದ ೨೫ ಕಿ.ಮೀ.ಗಳ ದೂರವಿದ್ದರೂ ಸಹ ಗಾಳಿ ಮಾರ್ಗದ ನೆಪ ಹೇಳಿ ರೈತರ ಜಮೀನನ್ನು ಪೋಡಿ ಮಾಡಲು ನಿರಾಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೂರಮಾಪನೆಯನ್ನು ಮಾಡುವಾಗ ಒಬ್ಬೊಬ್ಬ ಸರ್ವೆಯರ್ ತಮ್ಮದೇ ಆದ ರೀತಿಯಲ್ಲಿ ದೂರದ ಅಂಕಿಅAಶ ನೀಡಿ ಜನರನ್ನು ಮತ್ತು ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸರ್ವೆ ಇಲಾಖೆ ಮತ್ತು ತಹಸೀಲ್ದಾರ್‌ಗಳು ನಗರ ವ್ಯಾಪ್ತಿಗೆ ಬರುವ ಗಡಿಯನ್ನು ಅಧಿಕೃತವಾಗಿ ಸೂಚಿಸಿ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ತೆಗೆದುಕೊಳ್ಳಲಾಗಿದ್ದ ಕಂದಾಯ ಮತ್ತು ಅರಣ್ಯ ಭೂಮಿಯ ಜಂಟಿ ಸರ್ವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರೈತರ ಹಾಗೂ ನಿವೇಶನ ರಹಿತರ ಸಮಸ್ಯೆ ಮುಂದುವರೆದಿದೆ. ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸಬೇಕು. ಹಲವಾರು ಸರ್ವೆ ನಂಬರ್‌ಗಳಲ್ಲಿ ಅರಣ್ಯ ಭೂಮಿ ವಿಸ್ತೀರ್ಣ ಮತ್ತು ಕಂದಾಯ ಭೂಮಿ ಸರಿ ಹೊಂದಿದ್ದರೂ ಸಹ ಕಂದಾಯ ಇಲಾಖೆ ಭೂಮಿಗಳ ಪೋಡಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೆಕ್ಷನ್ ೪(೧) ಮೀಸಲು ಅರಣ್ಯ ಪ್ರಸ್ತಾವನೆಯನ್ನು ಸುಮಾರು ೭೦-೮೦ ವರ್ಷಗಳ ವರೆಗೆ ಸೆಕ್ಷನ್ ೧೭(೧) ಅಂತಿಮಗೊಳಿಸದೇ ಈಗಲೂ ಕಂದಾಯ ಗೋಮಾಳ ಎಂದು ಪಹಣಿಗಳು ಬರುತ್ತಿವೆ. ಕಂದಾಯ ದಾಖಲೆಯಲ್ಲಿರುವ ಭೂಮಿಗಳ ಮೇಲಿನ ಕಂದಾಯ ವಹಿವಾಟಿಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿ ಆತ್ಮಸ್ಥೈರ್ಯ ಕುಗ್ಗಿಸಲಾಗುತ್ತಿದೆ. ಕೂಡಲೇ ಈ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಇಂಡೀಕರಣ ಮಾಡಲು ರಾಜ್ಯ ಸರ್ಕಾರ ಹೊಸ ಸಾಫ್ಟ್ವೆರ್‌ವನ್ನು ಜಾರಿಗೆ ತಂದಿದ್ದು ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಕೆಲವು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲಾಗಿದೆ. ಕಳೆದ ಮೂರು ತಿಂಗಳಿAದ ಪೋಡಿ ನಂತರ ಪಹಣಿಯಲ್ಲಿ ಹೊಸ ನಂಬರ್ ಇಂಡೀಕರಣಕ್ಕೆ ಎಡಿಎಲ್‌ಆರ್ ಅವರಿಗೆ ನೀಡಲಾಗಿದೆ. ಹೊಸ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಚಿಕ್ಕಮಗಳೂರು ತಾಲೂಕಿನಲ್ಲಿ ೧೦೦ಕ್ಕೂ ಹೆಚ್ಚು ಕಡತಗಳು ವಿಲೇವಾರಿಯಾಗಿಲ್ಲ. ಸರ್ಕಾರ ಈ ಸಾಫ್ಟ್ವೇರ್ ಸರಿಯಾಗುವವರೆಗೆ ಹಿಂದಿನ ರೀತಿಯಲ್ಲಿಯೇ ಇಂಡೀಕರಣ ಮಾಡಲು ತಾತ್ಕಾಲಿಕವಾಗಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.