ಔರಾದ್‌ನ ಸಾಮರ್ಥ್ಯ ಸೌಧದಲ್ಲಿ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಎರಡನೇ ಹಂತದ ತರಬೇತಿಗೆ ತಾಪಂ ಇಒ ಮಾಣಿಕರಾವ ಪಾಟೀಲ್ ಚಾಲನೆ ನೀಡಿದರು. ಇಮಾಲಪ್ಪ, ಶಿವಕುಮಾರ ಘಾಟೆ, ಹಣಮಂತರಾಯ ಕೌಟಗೆ, ಶೋಭಾ, ರಾಜೇಶ್ವರಿ, ಸವಿತಾ ನಾಗೇಶ, ಶ್ರೀದೇವಿ ಇತರರಿದ್ದರು. 
ಜಿಲ್ಲೆ

ಕಂದಮ್ಮಗಳಿಗೆ ಕೂಸಿನ ಮನೆ ಆಸರೆ

ಔರಾದ್: ನರೇಗಾ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಸರ್ಕಾರದ ಮಹತ್ವಕಾಂಕ್ಷಿ ಕೂಸಿನ ಮನೆ (ಶಿಶು ಪಾಲನ ಕೇಂದ್ರ) ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಹೇಳಿದರು.

ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಗದಲ್ಲಿ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಎರಡನೇ ಹಂತದ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷತೆ, ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದರು.

ಕೂಸಿನ ಮನೆಗೆ ಏಳು ತಿಂಗಳಿನಿಂದ ಹಿಡಿದು ಮೂರು ವರ್ಷದ ಒಳಗಿನ ಮಕ್ಕಳು ಬರುತ್ತಾರೆ. ಅಂತಹ ಮಕ್ಕಳ ಆರೈಕೆ ಮಾಡುವುದು ಇಲಾಖೆ ಜವಾಬ್ದಾರಿ. ನರೇಗಾದಲ್ಲಿ ವರ್ಷಕ್ಕೆ ನೂರು ದಿನ ಕೆಲಸವನ್ನು ಕೊಡಲಾಗುವುದು. ೩೪೯ ರೂ. ಕೂಲಿ ಮೊತ್ತವಿದ್ದು, ಮಕ್ಕಳ ಆರೈಕೆ ತುಂಬಾ ಮುಖ್ಯ. ಯಾವುದೇ ತೊಂದರೆಗಳಿದ್ದರೆ ಪಿಡಿಒ ಗಮನಕ್ಕೆ ತರಬೇಕು. ಸಂಬಳದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದರು.

ಶಿಶು ಮತ್ತು ಅಭಿವೃದ್ಧಿ ಅಧಿಕಾರಿ ಇಮಾಲಪ್ಪ ಮಾತನಾಡಿ, ಕೂಸಿನ ಮನೆಗೆ ಬರುವ ಚಿಕ್ಕ ಮಕ್ಕಳು ರಕ್ಷಣೆ ಮಾಡುವುದು ನಿಮ್ಮ ಮೊದಲ ಕರ್ತವ್ಯ ಆಗಬೇಕು. ಕೂಸಿನ ಮನೆಗೆ ಅಂಗನವಾಡಿ ಮೇಲ್ವಿಚಾರಕಿಯರು ಭೇಟಿ ನೀಡಿ ಪರಿಶೀಲಿಸುತ್ತಾರೆ. ಹೀಗಾಗಿ ಸರಿಯಾಗಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು.

ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮತ್ತು ಹಣಮಂತರಾಯ ಕೌಟಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶೋಭಾ, ರಾಜೇಶ್ವರಿ, ಐಇಸಿ ಸಂಯೋಜಕಿ ಸವಿತಾ ನಾಗೇಶ, ತರಬೇತಿ ಸಂಯೋಜಕಿ ಶ್ರೀದೇವಿ ಇತರರಿದ್ದರು.