ಜಿಲ್ಲೆ

ಕಂತೇನಹಳ್ಳಿ ಕೆರೆಗೆ ಬಾಗಿನ ಸಮರ್ಪಿಸಿದ ಎನ್.ಆರ್.ಸಂತೋಷ್

ಅರಸೀಕೆರೆ : ನಗರದ ಕಂತೇನಹಳ್ಳಿ ಬಡಾವಣೆಗೆ ಹೊಂದಿಕೊಂಡಂತಿರುವ ಐತಿಹಾಸಿಕ ದೊಡ್ಡಕೆರೆ ಭರ್ತಿಯಾಗಿದ್ದು ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಕುಟುಂಬ ಸಹಿತ ಸಹಸ್ರಾರು ಮಹಿಳೆಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಆಗಮಿಸಿ ಭಾನುವಾರ ಮಧ್ಯಾಹ್ನ ಬಾಗಿನ ಸಮರ್ಪಿಸಿದರು.

ಖಾಸಗಿ ಲೇಔಟ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯೆ ಮೊದಲ ಪಾಠ ಶಾಲೆ, ಜನನಿ ತನೆ ಮೊದಲ ಗುರು ಎನ್ನುವ ಮಾತಿನಂತೆ ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಭವಿಷ್ಯ ರೂಪಿಸಲು ಪಣತೊಡಬೇಕು.ಆಗ ಮಾತ್ರವೇ ಸಶಕ್ತ ಹಾಗೂ ಸಮರ್ಥ ನಾಡನ್ನು ಕಟ್ಟಲು ಸಾಧ್ಯವಿದೆ.ಜತೆಗೆ ಭಾರತೀಯ ಸನಾತನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಉಚಿಳಿಸುವುದರ ಜತೆಗೆ ಮುಂದಿನ ಪೀಳಿಗೆಗೆ ವರ್ಗಾಯಿಸುವ ಅನಿವಾರ್ಯತೆ ನಮಗೀಗ ಬಂದೊದಗಿದೆ. ಬರೊಬ್ಬರಿ 14 ವರ್ಷದ ಬಳಿಕ ನಗರದ ಐತಿಹಾಸಿಕ ಕಂತೇನಹಳ್ಳಿ ಕರೆ ಭರ್ತಿಯಾಗಿದ್ದು ಕೋಡಿ ಬಿದ್ದಿದೆ.ನಾಡಿನ ಸುಭಿಕ್ಷೆ ಮನಗಂಡು ಪೂರ್ವಜರು ಕೆರೆ, ಕಟ್ಟೆಗಳನ್ನು ಕಟ್ಟಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಸಂಸ್ಕೃತಿ, ಹಿರಿಮೆ, ಗರಿಮೆಗಳನ್ನು ಜಗತ್ತಿಗೆ ಸಾರುವ ಕೆರೆಗೆ ಹಾರದಂತಹ ಅದ್ಬುತ ಹಾಗೂ ಐತಿಹಾಸಿಕ ಘಟನಾವಳಿಗಳು ನಡೆದಿವೆ.ಹೊಯ್ಸಳರ ದೊರೆ ಮೂರನೇ ಬಲ್ಲಾಳನ ಮಡದಿ ಉಮಾದೇವಿ ಇಲ್ಲಿನ ಜನರ ಕಲ್ಯಾಣಕ್ಕೆ ಕೆರೆಕಟ್ಟಿಸಿದ್ದರೆನ್ನುವ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕಳೆದ ಒಂದೂವರೆ ದಶಕದಿಂದ ಮಳೆಯಿಲ್ಲದೇ ಬತ್ತಿಹೋಗಿದ್ದ ಕೆರೆ ಸತತ ಮಳೆಯಿಂದಾಗಿ ಕೋಡಿ ಬಿದ್ದಿರುವುದು ಬದಲಾವಣೆಯ ದ್ಯೋತಕವಾಗಿದೆ ಎಂಬುದನ್ನು ತಾವೆಲ್ಲರೂ ಮನಗಾಣಬೇಕು.ಭವಿಷ್ಯದ ಹಿತೃಷ್ಟಿಯಿಂದ ಕೆರೆ,ಕಟ್ಟೆಗಳನ್ನುಉಳಿಸುವ ಸಂಕಲ್ಪ ನಮ್ಮದಾಗಲಿ ಎಂದು ಎನ್.ಆರ್.ಸಂತೋಷ್ ಕರೆ ನೀಡಿದರು.

ಇದಕ್ಕೂ ಮುನ್ನ ಗಣಪತಿ ಪೆಂಡಾಲಿನಲ್ಲಿ ಸಂಪ್ರದಾಯದಂತೆ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ಬಾಗಿನ ಸಮರ್ಪಿಸಿದರು. ಮುತ್ತೇದೆಯರಿಗೆ ಹರಿಶಿನ ಕುಂಕುಮ, ಸೀರೆ ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಸದಸ್ಯರಾದ ಶ್ವೇತಾ ರಮೇಶ್,ಭಾಸ್ಕರ್, ಗೀತಾ ಹೇಮಂತ್,ಅಭಿರಾಮಿ

ಶಿವನ್,ಮೇಲುಗಿರಿಗೌಡ,ಮುಖಂಡರಾದ ಹರ್ಷವರ್ಧನ್‌ರಾಜ್,ರಮೇಶ್ ನಾಯ್ಡು,ಶಿವನ್‌ರಾಜ್,ಅರುಣ್ ಕುಮಾರ್,ಸುಮಿತ್,ವೈಕೆ ದೇವರಾಜ್,ರಘು, ಮಹೇಂದ್ರ ಕುಮಾರ್, ಮಂಜುನಾಥ್ ಇತರರಿದ್ದರು.