ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್ ಚಾಲಕ, ನಿರ್ವಾಹಕರಿಗೆ ಕರೊನಾ ಭೀತಿ ನಡುವೆ ಸಿಬ್ಬಂದಿ ಖಾತೆಗಳಲ್ಲಿರುವ ವೈಯಕ್ತಿಕ ರಜೆಗಳಿಗೆ ಕತ್ತರಿ ಬೀಳುತ್ತಿದ್ದು, ಮುಂದೇನು ಎನ್ನುವ ಪ್ರಶ್ನೆ ಸಿಬ್ಬಂದಿಗೆ ಎದುರಾಗಿದೆ.
ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಹಂತ ಹಂತವಾಗಿ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಸಂಚರಿಸಿದ ಬಸ್ಗಳಿಗೆ ಹೊರ ಜಿಲ್ಲೆ ಸೇರಿ ಎಲ್ಲೆಡೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಂತರ ಹಂತ ಹಂತವಾಗಿ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ ಎನ್ನುವ ನಿರೀಕ್ಷೆ ಕರೊನಾ ಸೋಂಕು ಹೆಚ್ಚಾಗತೊಡಗಿದಂತೆ ಹುಸಿಯಾಗುತ್ತಲೇ ಬಂತು.
ಲಾಕ್ಡೌನ್ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದ್ದರಿಂದ ಚಾಲಕ, ನಿರ್ವಾಹಕರಿಗೆ ನಿಗಮದಿಂದ ಯಾವುದೆ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈಗ ಚಾಲನೆಗೆ ಬಸ್ ಸಿಕ್ಕರೆ ಸಾಕು, ನಿರ್ವಾಹಕರಿಗೆ ಕರ್ತವ್ಯಕ್ಕೆ ಅವಕಾಶ ಸಿಕ್ಕರೆ ಸಾಕು. ನಮ್ಮ ಕರ್ತವ್ಯ ದಾಖಲಿಸಬೇಕೆಂದು ಪ್ರತಿನಿತ್ಯ ಘಟಕಗಳ ಮುಂದೆ ಸಿಬ್ಬಂದಿ ಕಾದು ನಿಲ್ಲುವಂತಾಗಿದೆ. ಮಾಹಿತಿ ಪ್ರಕಾರ ಚಿಕ್ಕಮಗಳೂರು ಡಿಪೋದ ಸುಮಾರು 600 ನೌಕರರಲ್ಲಿ 80 ಮಂದಿಗೆ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ಸಿಗುತ್ತಿದೆ.
ಕೆಎಸ್ಆರ್ಟಿಸಿ ನಿಯಮದಲ್ಲಿ ಘಟಕದ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಾಗ ಮೊದಲು ಭದ್ರತಾ ಕೊಠಡಿಯಲ್ಲಿ ರುಜು ಮಾಡಿದ ನಂತರವೇ ಅವರು ಒಳಪ್ರವೇಶಿಸಬೇಕು. ಒಳಬಂದ ನಂತರ ಕೆಲಸ ಮಾಡಿದರಷ್ಟೇ ಅವರಿಗೆ ಆ ದಿನ ಹಾಜರಾತಿ ಸಿಗುತ್ತದೆ. ಈ ನಿಯಮದಿಂದ ಘಟಕದಲ್ಲಿರುವ ಮೆಕ್ಯಾನಿಕ್, ಸಿಬ್ಬಂದಿಗೆ ತೊಂದರೆಯಾಗದು. ಆದರೆ ಬಸ್ ಸಂಚಾರ ತೀರ ವಿರಳವಾಗಿರುವುದು ಚಾಲಕ, ನಿರ್ವಾಹಕರಿಗೆ ತಲೆನೋವು ತಂದಿದೆ.
ಪ್ರತಿನಿತ್ಯ ಬಹುತೇಕ ಚಾಲಕ, ನಿರ್ವಾಹಕರು ಘಟಕಕ್ಕೆ ಆಗಮಿಸಿ ಇಂದಿನ ಕೆಲಸ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದು ಆ ದಿನ ಕರ್ತವ್ಯ ನಿರ್ವಹಿಸಲು ಅವಕಾಶ ಸಿಗದಿದ್ದರೆ ಕಾದು ಕಾದು ಮನೆಗೆ ಮರಳಬೇಕಾಗುತ್ತದೆ. ಆದರೆ ಘಟಕದಿಂದ ಕರ್ತವ್ಯವಿಲ್ಲದೆ ವಾಪಸ್ ಹೋದರೆ ಅವರಿಗೆ ಕಾದಿದ್ದಕ್ಕೂ ಪ್ರಯೋಜನವಾಗದು. ಆ ದಿನದ ರಜೆ ಎಂದೇ ಪರಿಗಣಿಸಲಾಗುತ್ತದೆ. ಇಎಲ್, ಸಿಎಂಎಲ್ಗಳನ್ನು ಹಾಜರಾತಿಯಲ್ಲಿ ನಮೂದಿಸಲಾಗುತ್ತಿದೆ. ಇದು ಚಾಲಕ, ನಿರ್ವಾಹಕರಲ್ಲಿ ಆತಂಕ ಮೂಡಿಸಿದೆ.
ನಿಗಮದಿಂದ ಸಿಬ್ಬಂದಿಗೆ ವಾರದ ರಜೆ, ಇಎಲ್(ಗಳಿಕೆ ರಜೆ), ಸಿಎಂಎಲ್(ಪರಿವರ್ತಿತ) ರಜೆಗಳನ್ನು ನೀಡಲಾಗುತ್ತದೆ. ಇದನ್ನು ಚಾಲಕ, ನಿರ್ವಾಹಕರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದರು. ಚಾಲಕ ಬಸ್ ಪಡೆದು ಲಾಕ್ಶೀಟ್ ಪಡೆಯಬೇಕು. ನಿರ್ವಾಹಕ ಇಟಿಎಂ ಮಷಿನ್ ಪಡೆದರೆ ಅಂದು ಆತ ಕರ್ತವ್ಯಕ್ಕೆ ಹಾಜರಾಗಿರುವುದು ದಾಖಲಾಗುತ್ತದೆ. ಹೀಗಾದಾಗ ಮಾತ್ರ ಚಾಲಕ, ನಿರ್ವಾಹಕರು ಅಂದಿನ ಕೆಲಸ ಮಾಡಿದ್ದಾರೆಂದು ಸಾರಿಗೆ ನಿಗಮ ಪರಿಗಣಿಸುತ್ತದೆ. ಆದರೆ ಕರೊನಾ ಭೀತಿಯಿಂದ ಸಾರಿಗೆ ನೌಕರರಿಗೆ ವಾರಕ್ಕೆ ಮೂರು ದಿನ ವೈಯಕ್ತಿಕ ರಜೆಗಳನ್ನು ಬಳಸುವಂತಾಗಿದೆ. ಈ ರಜೆಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಘಟಕದ ಮುಂದೆ ಕಾದಿದ್ದರೂ ಹಾಜರಾತಿ ಪುಸ್ತಕದಲ್ಲಿ ವೈಯಕ್ತಿಕ ರಜೆ ಎಂದೇ ನಮೂದಾಗುತ್ತಿದೆ.
ಬಸ್ ಸಂಚಾರ ವಿರಳ: ಸಾರಿಗೆ ನಿಗಮ ಬಸ್ ಬಿಡಲು ಸಿದ್ಧ್ದದ್ದರೂ ಅಂದುಕೊಂಡಂತೆ ಪ್ರಯಾಣಿಕರು ಬರುತ್ತಿಲ್ಲ. ಕೆಲವು ಪ್ರಮುಖ ಮಾರ್ಗಗಳನ್ನು ಹೊರತುಪಡಿಸಿ ಉಳಿದ ಮಾರ್ಗಗಳಲ್ಲಿ ಒಂದು ಬಸ್ ಹೊರಡಲು ನಿಗದಿತ 30 ಮಂದಿ ಆಗಬೇಕು ಎಂದರೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಬಸ್ ಸಂಚರಿಸಿದರೂ ಪ್ರಯಾಣಿಕರು ಮಾತ್ರ ಮುಂದೆ ಬರುವುದಿಲ್ಲ. ಹೀಗಾಗಿ ಬಸ್ ಸಂಚಾರ ಕಡಿಮೆ ಇರುವುದರಿಂದ ವಾರದಲ್ಲಿ ಎರಡರಿಂದ ಮೂರು ದಿನ ಮಾತ್ರ ಚಾಲಕ, ನಿರ್ವಾಹಕರಿಗೆ ಕರ್ತವ್ಯಕ್ಕೆ ಅವಕಾಶ ನೀಡಲಾಗುತ್ತಿದೆ.
ನಿವೃತ್ತಿ ವೇಳೆ ಹಣಕ್ಕೆ ಕತ್ತರಿ?: ಖಾತೆಯಲ್ಲಿ 300 ಇಎಲ್ ಉಳಿದಿದ್ದಲ್ಲಿ ಒಂದು ವರ್ಷದ ಸಂಬಳ ಸಂಪೂರ್ಣವಾಗಿ ದೊರೆಯಲಿದೆ. ಆದರೆ ನಿವೃತ್ತಿಯಾಗುವ ವೇಳೆಯಲ್ಲಿ ದುಡಿಯುವ ಶಕ್ತಿಯೂ ಇಲ್ಲದಿದ್ದ ಸಂದರ್ಭದಲ್ಲಿ ತಮ್ಮ ಗಳಿಕೆ ರಜೆಯನ್ನು ಆಧರಿಸಿ ನೀಡುವ ಮೊತ್ತಕ್ಕೂ ಸಂಚಕಾರ ಬರಲಿದೆ ಎನ್ನುವ ಆತಂಕ ನೌಕರರನ್ನು ಕಾಡುತ್ತಿದೆ.
ಸರ್ಕಾರ ಏಪ್ರಿಲ್ ಹಾಗೂ ಮೇಗೆ ತಲಾ 325 ಕೋಟಿ ರೂ. ನೀಡಿದ್ದು, ತಾಂತ್ರಿಕವಾಗಿ ಸಮಸ್ಯೆ ಎದುರಾಗುವುದರಿಂದ ಇದೀಗ ಈ ರೀತಿ ಗಳಿಕೆ ಹಾಗೂ ಪರಿವರ್ತಿತ ರಜೆಗಳನ್ನು ಹೊಂದಾಣಿಕೆ ಮಾಡಿಕೊಂಡು ನೌಕರರ ವೇತನ ನೀಡಲಾಗುತ್ತಿದೆ. ಆದರೆ ನಿಗಮ ಸುಸ್ಥಿತಿಗೆ ಬಂದ ಬಳಿಕ ಈ ವ್ಯವಸ್ಥೆ ಬದಲಾವಣೆಯಾಗಲಿದ್ದು, ಸಮಸ್ಯೆ ಬಗೆಹರಿಯಲಿದೆ ಎನ್ನುವ ಮಾತು ನಿಗಮದ ಅಧಿಕಾರಿಗಳಿಂದ ಕೇಳಿಬರುತ್ತಿದೆ.
ನೌಕರರ ಖಾತೆಯಲ್ಲಿರುವ ವೈಯಕ್ತಿಕ ರಜೆಗಳನ್ನು ಆಧರಿಸಿಯೇ ಸರ್ಕಾರದಿಂದ ಒದಗಿಸಿದ ಹಣವನ್ನು ಬಳಸಿ ಪ್ರಸ್ತುತ ಸಿಬ್ಬಂದಿ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮತ್ತೆ ನಿರ್ಧಾರವಾದ ಬಳಿಕ ನೌಕರರ ಇಎಲ್ಗಳು ಅವರ ಖಾತೆಗೆ ಮರು ಜಮೆಯಾಗುತ್ತವೆ. ಹಾಗಾಗಿ ಈ ಬಗ್ಗೆ ಆತಂಕ ಅನಗತ್ಯ ಎನ್ನುತ್ತಾರೆ ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಡಿಸಿ ಎಚ್.ಟಿ.ವೀರೇಶ್.