ಜಿಲ್ಲೆ

ಕಂಟೇನ್ಮೆಂಟ್ ಪ್ರದೇಶದಲ್ಲೂ ನಿಯಮ ಉಲ್ಲಂಘನೆ

ಗದಗ: ನಗರದ ಕಂಟೇನ್ಮೆಂಟ್ ಪ್ರದೇಶ ಎಂದು ಘೊಷಿಸಿರುವ ಗಂಜಿ ಬಸವೇಶ್ವರ ವೃತ್ತ ಪ್ರದೇಶದಲ್ಲಿ ಜನರು ನಿಯಮಗಳನ್ನು ಪಾಲಿಸದಿರುವುದು ಜಿಲ್ಲಾಡಳಿತಕ್ಕೆ ತಲೆ ಬಿಸಿ ಉಂಟು ಮಾಡಿದೆ.

ಗಂಜಿ ಬಸವೇಶ್ವರ ವೃತ್ತದ ಸುತ್ತಳತೆಯ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೊಷಿಸಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ತಾಕೀತು ಮಾಡಿದ್ದರೂ ಜನರು ನಿಯಮ ಉಲ್ಲಂಘಿಸಿ ಕಂಟೇನ್ಮೆಂಟ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾರೆ. ಹೀಗಾಗಿ, ಕರೊನಾ ವೈರಸ್ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಇದನ್ನು ನಮ್ಮ ಜನರು ಏತಕ್ಕಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗಂಜಿ ಬಸವೇಶ್ವರ ವೃತ್ತದಲ್ಲಿ ಒಟ್ಟು ಮೂರು ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಮೊದಲ ರೋಗಿ ಗುಣಮುಖರಾಗಿದ್ದಾರೆ. ಎರಡು ಪ್ರಕರಣಗಳು ಸಕ್ರಿಯವಾಗಿವೆ. ಈ ಪ್ರದೇಶಕ್ಕೆ ಸೋಂಕು ಹೇಗೆ ತಗುಲಿತು ಎಂಬುದೇ ತಿಳಿದುಬಂದಿಲ್ಲ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜನರು ಜವಾಬ್ದಾರಿ ಮರೆತು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಅವರು ಗಂಜಿ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ನೀಡಿದ್ದಾರೆ. ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿವೈಎಸ್ಪಿ ಪ್ರಲ್ಹಾದರಾವ್, ಗದಗ- ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಜನಜಾಗೃತಿ ಕಾರ್ಯವನ್ನು ಮುಂದುವರಿಸಿದ್ದಾರೆ.

ಜನ ಅರ್ಥ ಮಾಡಿಕೊಳ್ಳಲಿ

ಗಂಜಿ ಬಸವೇಶ್ವರ ವೃತ್ತ ಪ್ರದೇಶದಲ್ಲಿ ಕರೊನಾ ಎರಡು ಪ್ರಕರಣಗಳು ದೃಢಪಟ್ಟಿರುವುದು ಕಳವಳಕಾರಿ ವಿಷಯ. ಈ ಪ್ರದೇಶಗಳ ಜನರ ಆರೋಗ್ಯ ಸಂರಕ್ಷಣೆಗಾಗಿ ಸರ್ಕಾರವು ಆರೋಗ್ಯ ವಿಪತ್ತು ಕಾಯ್ದೆಯಡಿ ಜಾರಿಗೊಳಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೊರಗೆ ಕಾಲಿಟ್ಟರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ಮನೆ ಬಿಟ್ಟು ಹೊರಗೆ ಬರಬಾರದು ಎಂದು ಪ್ರತಿಬಂಧಿಸಲಾಗಿದೆ. ನಿರ್ಬಂಧಿತ ಪ್ರದೇಶದ ಜನರು ಅರ್ಥ ಮಾಡಿಕೊಂಡು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಮನವಿ ಮಾಡಿದ್ದಾರೆ.

ಹೊರಗಿನಿಂದ ಬಂದವರ ತಪಾಸಣೆ

ಲಾಕ್​ಡೌನ್ ಸಡಿಲಿಕೆಯಿಂದ ಬಸ್ ಮೂಲಕ ಅಂತಾರಾಜ್ಯ ಮತ್ತು ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ನಗರದ ಹೊಸ ಬಸ್ ನಿಲ್ದಾಣದಲ್ಲಿ ಕೋವಿಡ್-19 ಸೋಂಕಿನ ಲಕ್ಷಣ ಕುರಿತು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ಅವರ ಸಂಪೂರ್ಣ ವಿವರವನ್ನು ನೋಂದಣಿ ಮಾಡಿಕೊಂಡು ಕೈಗೆ ಸೀಲ್ ಹಾಕಲಾಗುತ್ತಿದೆ. ಜಿಲ್ಲೆಗೆ ಬಂದಿರುವ ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಕೂಡಲೆ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಗಂಟಲ ಮಾದರಿ ದ್ರವವನ್ನು ಪರೀಕ್ಷೆಗೆ ಕಳಿಸಿ ಕ್ವಾರಂಟೈನ್​ನಲ್ಲಿ ಇಡಲಾಗುತ್ತಿದೆ. ಆರೋಗ್ಯದಿಂದ ಇರುವ ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಕೆಂಪು ವಲಯದಲ್ಲಿರುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ದಮನ್ ದಿಯೂ, ತಮಿಳುನಾಡಿನಿಂದ ಬಂದಿರುವ ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇಲ್ಲಿವರೆಗೆ 3336 ಜನರು ಹೊರ ರಾಜ್ಯ ಹಾಗೂ 2484 ಜನರು ಬೇರೆ ಜಿಲ್ಲೆಯಿಂದ ಗದಗ ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

EndFragment