ಜಿಲ್ಲೆ

ಕಂಟೇನ್ಮೆಂಟ್ ಜೋನ್ ಆಗಿ 9ನೇ ವಾರ್ಡ್

ಚಿಂತಾಮಣಿ : ಕರೊನಾ ಸೋಂಕು ಕಾಣಿಸಿಕೊಂಡಿರುವ ನಗರದ 9ನೇ ವಾರ್ಡನ್ನು ಈಗಾಗಲೇ ಸೀಲ್‌ಡೌನ್ ಮಾಡಿದ್ದು ಇದೀಗ ಆ ವಾರ್ಡನ್ನು ಕಂಟೇನ್ಮೆಂಟ್ ಜೋನ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ನಗರದ ಇತರೆ ವಾರ್ಡ್‌ಗಳನ್ನು ಬಫರ್ ಜೋನ್ ಆಗಿ ಘೋಷಣೆ ಮಾಡಿರುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮತ್ತು ಉಪವಿಭಾಗಾಧಿಕಾರಿ ರಘುನಂದನ್ ಹೇಳಿದರು.

ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಓಪನ್ ಮಾಡುವುದಿಲ್ಲ. ಸೌಲಭ್ಯಗಳು ಬೇಕಾದಲ್ಲಿ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ. ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲರು ಸರ್ಕಾರದ ಸುತ್ತೋಲೆಗಳನ್ನು ಪಾಲಿಸಬೇಕು. ದ್ವಿಚಕ್ರ ವಾಹನದಲ್ಲಿ ಒಬ್ಬರೇ ಓಡಾಡಬೇಕು ಎಂದರು.

ಈಗಾಗಲೇ 62 ಮಂದಿ ಸೆಕೆಂಡರಿ ಕಾಂಟ್ಯಾಕ್ಟ್ ಗುರುತಿಸಿದ್ದು ಅವರಲ್ಲಿ 55 ಮಂದಿಯ ಸ್ಯಾಂಪಲ್ ಪರೀಕ್ಷೆ ಮಾಡಿದ್ದು 100ಕ್ಕೂ ಹೆಚ್ಚು ಸಂಪರ್ಕ ಇರುವ ಬಗ್ಗೆ ತಿಳಿದು ಬಂದಿದೆ. 71 ವರ್ಷದ ವ್ಯಕ್ತಿಗೆ ಸೋಂಕು ಎರಡು ಮೂರು ಕಡೆಯಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಅವರು ಚಿನ್ನದ ವ್ಯಾಪಾರಿಯಾಗಿದ್ದು, ಅಂಗಡಿಗೆ ಬಂದವರಿಂದ ಬಂದಿದೆಯಾ ಅಥವಾ ಬೆಂಗಳೂರಿನ ಆಸ್ಪತ್ರೆಯಿಂದ ಬಂದಿದೆಯಾ ಅಥವಾ ಲಂಡನ್‌ನಿಂದ ಬಂದ ಮೊಮ್ಮಗನಿಂದ ಬಂದಿದೆಯಾ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.ಡಿವೈಎಸ್‌ಪಿ ಶ್ರೀನಿವಾಸ್, ನಗರಠಾಣೆ ಇನ್‌ಸ್ಪೆಕ್ಟರ್ ಜಿ.ಆನಂದ್ ಕುಮಾರ್, ಗ್ರಾಮಾಂತರ ಠಾಣೆ ಸಿಪಿಐ ಕೆ.ಎನ್.ಶ್ರೀನಿವಾಸಪ್ಪ ಮತ್ತಿತರರಿದ್ದರು.