ಜಿಲ್ಲೆ

ಕಂಟೇನರ್‌ನಲ್ಲಿದ್ದ 40ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗಾಹುತಿ

ಹೊಸೂರು: ತಮಿಳುನಾಡಿನ ಹೊಸೂರು ಸಮಿಪದ ಕೆಳಮಂಗಲದಲ್ಲಿ ಹೊಸೂರು ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರೊಳಗಿದ್ದ 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಉದ್ದನಪಲ್ಲಿ ಪ್ರದೇಶದ ಗೋದಾಮಿನಿಂದ ಮಹಾರಾಷ್ಟ್ರ ನೋಂದಣಿ ನಂಬರ್‌ನ 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಕಂಟೇನರ್ ಲಾರಿಯಲ್ಲಿ ಹೊಸೂರಿಗೆ ಕೊಂಡೊಯ್ಯುತ್ತಿದ್ದಾಗ ಬೋಧಿಚಿಟ್ಟಿಪಲ್ಲಿಯಲ್ಲಿ ವಿದ್ಯುತ್ ತಂತಿ ತಗುಲಿ ಲಾರಿ ಹೊತ್ತಿ ಉರಿದಿದೆ. ಲಾರಿ ಚಾಲಕ ಬೆಂಕಿ ಹೆಚ್ಚಾದ ಬಳಿಕ 5 ಕಿ.ಮೀ.ದೂರದಲ್ಲಿ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಕಂಟೇನರ್ ಲಾರಿ ರಸ್ತೆ ಬದಿಯಲ್ಲಿ ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿಲ್ಲ. ಕೆಳಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.