ಜಿಲ್ಲೆ

ಕಂಟಕಪ್ರಾಯ ಎಲೆಕ್ಟ್ರಿಕ್ ಡಿಸ್ಪ್ಲೆ ಬೋರ್ಡ್

ಮೈಸೂರು: ಸರ್ಕಾರದ ಯೋಜನೆಗಳು, ಸ್ವಚ್ಛತೆ ಕುರಿತು ಅರಿವು ಮೂಡಿಸಲು ನಗರದಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಡಿಸ್ಪ್ಲೆ ಬೋರ್ಡ್‌ಗಳು ವಾಹನ ಸವಾರರನ್ನು ತಬ್ಬಿಬ್ಬುಗೊಳಿಸುತ್ತಿವೆ.

ದೇಶದ ಸ್ವಚ್ಛ ನಗರಿಗಳ ಪೈಕಿ ಒಂದಾಗಿರುವ ಮೈಸೂರನ್ನು ಫ್ಲೆಕ್ಸ್ ಮುಕ್ತ ನಗರವಾಗಿ ಘೋಷಿಸಲಾಗಿದೆ. ಹೀಗಾಗಿ ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಸಿ ಸರ್ಕಾರದ ಯೋಜನೆಗಳು ಹಾಗೂ ಜಾಹೀರಾತು ಪ್ರಕಟಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯು ನಗರದ ರಾಮಸ್ವಾಮಿ ವೃತ್ತ, ಚಾಮರಾಜ ವೃತ್ತ, ರೈಲು ನಿಲ್ದಾಣ, ಒಂಟಿಕೊಪ್ಪಲು ಸೇರಿದಂತೆ ವಿವಿಧೆಡೆ ಎಲ್‌ಇಡಿ ಎಲೆಕ್ಟ್ರಿಕ್ ಡಿಸ್ಪ್ಲೆ ಬೋರ್ಡ್ ಅಳವಡಿಸಿದೆ. ಆದರೆ, ಈ ಬೋರ್ಡ್‌ಗಳು ಅತಿಯಾದ ಬ್ರೈಟ್‌ನೆಸ್ ಹೊಂದಿರುವ ಪರಿಣಾಮ ಜನರ ಕಣ್ಣು ಕೋರೈಸುತ್ತಿವೆ. ವಿಶೇಷವಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಕೆಲವು ಚಾಲಕರು ಜಾಹೀರಾತು ಗಮನಿಸಿಕೊಂಡು ವಾಹನ ಚಾಲನೆ ಮಾಡುವವಾಗ ಅಪಘಾತವಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಹೀಗಾಗಿ ನಗರ ಪಾಲಿಕೆ ಆದಷ್ಟು ಬೇಗ ಬೋರ್ಡ್‌ನ ಬ್ರೈಟ್‌ನೆಸ್ ಕಡಿಮೆ ಮಾಡುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಅಪಘಾತಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ.

ಫ್ಲೆಕ್ಸ್ ಮುಕ್ತಗೊಂಡಿಲ್ಲ:
ನಗರವನ್ನು ಫ್ಲೆಕ್ಸ್ ಮುಕ್ತ ಎಂದು ನಗರ ಪಾಲಿಕೆ ಘೋಷಣೆ ಮಾಡಿದರೂ ನಗರ ಸಂಪೂರ್ಣವಾಗಿ ಫ್ಲೆಕ್ಸ್ ಮುಕ್ತಗೊಂಡಿಲ್ಲ. ವಿಶೇಷವಾಗಿ ರಾಜಕಾರಣಿಗಳು ವಿವಿಧ ಹುದ್ದೆ ಅಲಂಕರಿಸಿ ನಗರಕ್ಕೆ ಆಗಮಿಸುವ ಸಂದರ್ಭ, ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಫ್ಲೆಕ್ಸ್, ಕಟೌಟ್‌ಗಳು ನಗರದಲ್ಲಿ ರಾರಾಜಿಸುತ್ತಿರುತ್ತವೆ. ಆದರೆ, ಇದನ್ನು ಪಾಲಿಕೆ ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಕೇವಲ ನಾಮ್‌ಕೇವಾಸ್ತೆಗೆ ಕೆಲವು ಜನರಿಗೆ ದಂಡ ವಿಧಿಸುವ ಪ್ರಯತ್ನವನ್ನಷ್ಟೇ ಪಾಲಿಕೆ ಮಾಡಿದೆ.

ಜಾಹೀರಾತು ನೀತಿ ಜಾರಿಗೆ ನಿರಾಸಕ್ತಿ:
ನಗರ ಪಾಲಿಕೆ ಈಗಾಗಲೇ ನಗರದಲ್ಲಿ ಜಾಹೀರಾತು ನೀತಿ ಜಾರಿಗೊಳಿಸಿದೆ. ಜಾಹೀರಾತು ನೀತಿಯ ಪ್ರಕಾರ ಪಾರಂಪರಿಕ ಕಟ್ಟಡಗಳು, ಗೋಡೆಗಳು ಸೇರಿದಂತೆ ವಿವಿಧೆಡೆ ಜಾಹೀರಾತು ಪ್ರದರ್ಶನಕ್ಕೆ ಕಡಿವಾಣ ಹಾಕಬೇಕು. ಆದರೆ, ಇಂದಿಗೂ ನಗರದ ಹಲವೆಡೆ ಗೋಡೆ ಬರಹಗಳು, ಗೋಡೆಗಳ ಮೇಲೆ ಜಾಹೀರಾತು ಅಂಟಿಸುವುದು ನಿಂತಿಲ್ಲ.

ಜಾಹೀರಾತು ಪ್ರದರ್ಶನಕ್ಕೆ ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ವಲಯಗಳನ್ನು ರಚಿಸಲಾಗಿದೆ. ಡಿ ವಲಯವು ನಗರದ ಪಾರಂಪರಿಕ ಕಟ್ಟಡಗಳನ್ನು ಒಳಗೊಂಡಿದೆ. ಪಾರಂಪರಿಕ ಕಟ್ಟಡಗಳ 100 ಮೀಟರ್ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣ ನಿಷೇಧಿ ಸಲಾಗಿದೆ. ಉಳಿದಂತೆ ಎ, ಬಿ ಮತ್ತು ಸಿ ವಲಯಕ್ಕೆ ಪ್ರತ್ಯೇಕ ಜಾಹೀರಾತು ದರ ಹಾಗೂ ಜಾಹೀರಾತು ಪ್ರದರ್ಶನಕ್ಕೆ ನೀತಿ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಈ ಯಾವ ನಿಯಮಾವಳಿಗಳು ಕೂಡ ನಗರದಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ. ನಗರದಲ್ಲಿ ಸ್ವಚ್ಛತೆಗೆ ಸಹಕರಿಸದೆ ಇರುವವರಿಗೆ ನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ನಗರದ ಅಂದಗೆಡಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲು ಪಾಲಿಕೆ ಆಸಕ್ತಿ ತೋರಬೇಕಾಗಿದೆ.