ಹುಬ್ಬಳ್ಳಿ: ನಗರದ ದಾಜಿಬಾನಪೇಟೆ ಎಂದಾಕ್ಷಣ ಕಣ್ಣೆದುರಿಗೆ ಬರುವುದು ವ್ಯಾಪಾರ, ಜನ ಹಾಗೂ ವಾಹನ ದಟ್ಟಣೆ. ಬಟ್ಟೆ, ಎಲೆಕ್ಟ್ರಿಕಲ್ ಉಪಕರಣ, ಆಹ್ವಾನ ಪತ್ರಿಕೆ ಕಾರ್ಡ್, ಪಾತ್ರೆ ಮುಂತಾದವುಗಳ ಖರೀದಿಗೆ ಜನ ಸದಾ ಬರುತ್ತಲೇ ಇರುತ್ತಾರೆ. ಅನೇಕ ಹೋಟೆಲ್ಗಳೂ ಇವೆ. ಮದುವೆ ಹಾಗೂ ಇತರೆ ಸಮಾರಂಭಗಳ ಬಟ್ಟೆ ಖರೀದಿಗಂತೂ ಇಡೀ ಉತ್ತರ ಕರ್ನಾಟಕದಲ್ಲೇ ಇಲ್ಲಿನ ಜವಳಿ ಅಂಗಡಿಗಳು ಹೆಸರುವಾಸಿಯಾಗಿವೆ. ಸರ್ಕಾರಕ್ಕೆ ಈ ಪ್ರದೇಶದಿಂದ ಜಿಎಸ್ಟಿ, ಆಸ್ತಿ ಕರ ಹಾಗೂ ಇತರೆ ತೆರಿಗೆಗಳು ಹೆಚ್ಚಿನ ಪ್ರಮಾಣದಲ್ಲಿ ಸಂದಾಯ ವಾಗುತ್ತವೆ. ಆದರೆ, ಇಷ್ಟೊಂದು ಆದಾಯ ತರುವಂತಹ ಈ ಪ್ರಮುಖ ವಾಣಿಜ್ಯ ಪ್ರದೇಶವನ್ನು ಸುಂದರವಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿಲ್ಲ. ಕಳೆದ ಕೆಲ ದಿನಗಳಿಂದ ಮಹಾನಗರ ಪಾಲಿಕೆ,
ಸ್ಮಾರ್ಟ್ಸಿಟಿ ಕಂಪನಿ ಹಾಗೂ ಜಲಮಂಡಳಿಗಳಿಂದ ನಡೆಯುತ್ತಿರುವ ಕಾಮಗಾರಿಗಳು ಕೂಡ ಅವೈಜ್ಞಾನಿಕವಾಗಿವೆ. ಆಮೆಗತಿಯಲ್ಲಿ ಸಾಗಿವೆ. ಹೀಗಾಗಿ, ಈ ಪ್ರದೇಶದಲ್ಲಿ ಜನ ಹಾಗೂ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ತುಳಜಾಭವಾನಿ ದೇವಸ್ಥಾನ ವೃತ್ತ, ಹಳೇ ಪದ್ಮಾ ಟಾಕೀಸ್ ಎದುರಿನ ರಸ್ತೆ ಸೇರಿ ಈ ಭಾಗದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ಕಳಪೆ ಆಗಿರುವುದನ್ನು ಈ ಚಿತ್ರಗಳೇ ಸಾಬೀತುಪಡಿಸುವಂತಿವೆ.
ನಿಧಾನ ಗತಿಯ ಯುಜಿಡಿ ಕಾಮಗಾರಿ: 2ನೇ ಹಂತದ ಅಮೃತ ಯೋಜನೆಯಡಿ 156 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯ 720 ಮೀ. ಉದ್ದ ಒಳಚರಂಡಿ ನಿರ್ವಿುಸಲಾಗುತ್ತಿದೆ. ಹಳೇ ಪದ್ಮಾ ಟಾಕೀಸ್ ಎದುರು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಪೈಪ್ ಅಳವಡಿಸಲಾಗುತ್ತಿದೆ. ಅಹ್ಮದಾಬಾದ್ನ ಲಕ್ಷ್ಮೀ ಇನ್ಫ್ರಾಸ್ಟ್ರಕ್ಚರ್ಗೆ ಗುತ್ತಿಗೆ ನೀಡಿದ್ದು, 1 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆ ಜಲಮಂಡಳಿ ಅಧಿಕಾರಿಗಳದ್ದು. ಕೊಪ್ಪಿಕರ ರಸ್ತೆಯಿಂದ ಸೆಟ್ಲೈಟ್ ಕಾಂಪ್ಲೆಕ್ಸ್ ಹಾಗೂ ಚಿಟಗುಪ್ಪಿ ಆಸ್ಪತ್ರೆಯ ವೃತ್ತದವರೆಗೆ ಯುಜಿಡಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಯುಜಿಡಿ ಸೌಲಭ್ಯ ಅಳವಡಿಕೆ ನಂತರ ಮೊದಲಿನಂತೆ ರಸ್ತೆ ನಿರ್ವಿುಸುವ ಹೊಣೆಗಾರಿಕೆ ಗುತ್ತಿಗೆದಾರರದ್ದು. ಕಾಮಗಾರಿಯ ವೇಗ ಗಮನಿಸಿದರೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟಸಾಧ್ಯ. ಅದುವರೆಗೆ ಸಾರ್ವಜನಿಕರ ಪರದಾಟವಾಗಲಿ, ಈ ರಸ್ತೆಯ ವ್ಯಾಪಾರಿಗಳ ಚಿಂತೆಯಾಗಲಿ ತಪ್ಪಿದ್ದಲ್ಲ.
ದಾಜಿಬಾನಪೇಟೆ ಫುಟ್ಪಾತ್ನ ಪೇವರ್ಸ್ ಒಡೆದಿವೆ. ಸ್ಮಾರ್ಟ್ಸಿಟಿ ಯೋಜನೆಯಡಿ ರಸ್ತೆ ನಿರ್ವಿುಸುವ ಸಂದರ್ಭದಲ್ಲಿ ಹೊಸ ಪೇವರ್ಸ್ ಅಳವಡಿಸಲಾಗುತ್ತದೆ. ಹಾಗಾಗಿ, ಪೇವರ್ಸ್ ಬದಲಾಯಿಸುವ ಕೆಲಸ ಕೈಗೊಂಡಿಲ್ಲ.ಮನೋಹರ ಬಿ. ಮಹಾನಗರ ಪಾಲಿಕೆ ವಲಯ ಕಚೇರಿ 9ರ ಸಹಾಯಕ ಆಯುಕ್ತ
ಪೂರ್ಣ ಹೂಳು ಎತ್ತಲು ಅಸಡ್ಡೆ: ಮಳೆಗಾಲ ಬಂದರೆ ದಾಜಿಬಾನಪೇಟೆ ತುಳಜಾಭವಾನಿ ದೇವಸ್ಥಾನದ ಭಕ್ತರಿಗೆ, ಈ ವೃತ್ತದ ವ್ಯಾಪಾರಸ್ಥರಿಗೆ ಆತಂಕ ತಪ್ಪಿದ್ದಲ್ಲ. ಮಳೆಗಾಲದಲ್ಲಿ ನಾಲಾ ತುಂಬಿ, ಚರಂಡಿ ನೀರು ಈ ವೃತ್ತದಲ್ಲಿ ನಿಲ್ಲುತ್ತದೆ. ಅನೇಕ ಬಾರಿ ಈ ನೀರು ಸಮೀಪದ ದೇವಸ್ಥಾನ, ಸುತ್ತಲಿನ ಅಂಗಡಿಗಳಿಗೆ ನುಗ್ಗಿದೆ. ಚರಂಡಿ ನೀರಿನೊಂದಿಗೆ ವಿಷಜಂತುಗಳೂ ಕಾಣಿಸಿಕೊಳ್ಳುತ್ತವೆ. ಈ ವೃತ್ತದ ನಾಲಾದ ಹೂಳು ತೆಗೆದರೆ ನೀರು ಸರಾಗವಾಗಿ ಹರಿಯುತ್ತದೆಂಬ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಹೂಳು ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ. ಐದಾರು ಅಡಿ ಆಳ ಇರುವ ನಾಲಾದಲ್ಲಿ ಎರಡ್ಮೂರು ಅಡಿ ಆಳದ ಹೂಳನ್ನಷ್ಟೇ ತೆಗೆಯಲಾಗಿದೆ ಎಂಬ ಅಸಮಾಧಾನ ಜನರದ್ದು. ಪಾಲಿಕೆಯಿಂದ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಈ ವೃತ್ತದಲ್ಲಿನ ನಾಲಾದ ಹೂಳು ತೆಗೆದು, ಹೊಸ ಸ್ಲ್ಯಾಬ್ ನಿರ್ವಿುಸಲಾಗುತ್ತಿದೆ. ಇನ್ನೂ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಆಶ್ವಾಸನೆ ಪಾಲಿಕೆ ವಲಯ ಕಚೇರಿ 9ರ ಅಧಿಕಾರಿಗಳದ್ದು. ಆದರೆ, ಈ ಗಡುವು ಅಸಾಧ್ಯ ಎಂಬಂತಹ ಸ್ಥಿತಿ ಇದೆ.
ಕಿತ್ತು ಹೋದ ಫುಟ್ಪಾತ್ ಪೇವರ್ಸ್್ಸ: ಉದಾಹರಣೆಗೆ ಈಗಾಗಲೇ ಫುಟ್ಪಾತ್ನಲ್ಲಿ ಕೈಗೊಂಡಿರುವ ಪೇವರ್ಸ್ ಅಳವಡಿಕೆ ಕಾಮಗಾರಿಯನ್ನೇ ನೋಡಿ. ಈ ಕಾಮಗಾರಿ ಕಳಪೆ ಎನ್ನುವುದನ್ನು ಈ ಚಿತ್ರಗಳೇ ಸೂಚಿಸುತ್ತವೆ. ನಾಲ್ಕೈದು ತಿಂಗಳ ಹಿಂದೆಯಷ್ಟೇ ಇಲ್ಲಿ ಪೇವರ್ಸ್ ಹಾಕಲಾಗಿದೆ. ಆದರೆ, ಈಗಾಗಲೇ ಸಾಕಷ್ಟು ಕಡೆ ಕಿತ್ತು ಹೋಗಿವೆ. ಕೆಲವೆಡೆಗಳಲ್ಲಿ ಪೂರ್ಣ ಪೇವರ್ಸ್ ಅಳವಡಿಸದೆ ಕಾಂಕ್ರೀಟ್ ಹಾಕಿ ಕೈಬಿಡಲಾಗಿದೆ. ಅಗಲದಲ್ಲಿ ಫುಟ್ಪಾತ್ ಸಮನಾಗಿಲ್ಲ. ಅಂಗಡಿ ಬದಿಯಿಂದ ನೋಡಿದಾಗ ಫುಟ್ಪಾತ್ ನೇರ ಇಲ್ಲದೆ ಇರುವುದು ಸಹಜವೇ ಆಗಿದೆ. ಆದರೆ, ರಸ್ತೆಯಿಂದಲೂ ಕೆಲವೆಡೆ ನೇರವಾಗಿ ಇರದೆ ಹಿಂದೆ ಮುಂದೆ ಸರಿದಿದೆ. ಎಂಥವರಿಗಾದರೂ ಈ ವ್ಯತ್ಯಾಸ ತಕ್ಷಣವೇ ಕಾಣಿಸುತ್ತದೆ. ಹೀಗಿದ್ದರೂ ಇದು ಗುತ್ತಿಗೆದಾರರು, ಸಂಬಂಧಪಟ್ಟ ಸರ್ಕಾರಿ ಇಂಜಿನಿಯರ್ಗಳಿಗೆ ಏಕೆ ಕಾಣಿಲಿಲ್ಲ ಎಂಬ ಪ್ರಶ್ನೆಗಳನ್ನು ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ.
ಗಟಾರವೋ ಹಾವಿನ ದೇಹವೋ?: ಮೂರುಸಾವಿರ ಮಠ ಎದುರಿನ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ವಿುಸುತ್ತಿರುವ ಗಟಾರು ನೇರವಾಗಿ ಇರದೆ, ಹಾವಿನ ದೇಹದಂತೆ ಹೊರಳಾಡಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿಯಲು ಅಡೆತಡೆಯಾಗುವುದು ಖಚಿತ. ಈ ಮೊದಲು ಇದ್ದ ಗಟಾರು ಅದೇ ರೀತಿಯಾಗಿತ್ತು. ಹೀಗಾಗಿ, ಗಟಾರು ಗೋಡೆಗೆ ಸಿಮೆಂಟ್ ಹಾಕಿ, ಸ್ಲ್ಯಾಬ್ ಹಾಕಲಾಗಿದೆ ಎಂಬ ಹೇಳಿಕೆ ಅಧಿಕಾರಿಗಳದ್ದು. ಈ ಮೊದಲಿದ್ದ ಗಟಾರು ಅನ್ನು ಸರಿಪಡಿಸಲು ಅಧಿಕಾರಿಗಳು ಹೋಗದಿರುವುದು ಅಚ್ಚರಿ ಮೂಡಿಸುವಂತಿದೆ. ಒಟ್ಟು 50.75 ಕೋಟಿ ರೂ. ವೆಚ್ಚದಲ್ಲಿ 10.05 ಕಿಮೀ ಉದ್ದ ಪ್ಯಾಕೇಜ್ 2ರ ಅಡಿ ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆಯಲ್ಲಿ ಡಾಂಬರ್ ರಸ್ತೆ ನಿರ್ವಣ, ರಸ್ತೆ ಎರಡೂ ಬದಿ ಗಟಾರು, ಪೇವರ್ಸ್, ಎಲ್ಇಡಿ ಬೀದಿ ದೀಪ ಸೇರಿ ಹಲವಾರು ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ, ಈ ಮೊದಲು ಸೌಲಭ್ಯ ಅಳವಡಿಕೆಯಲ್ಲಿ ಆಗಿರುವ ತಪು್ಪ ಗಳನ್ನು ಸರಿಪಡಿಸದೆ, ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.