ಚಿತ್ರದುರ್ಗ: ಮಾನವನ ಬದುಕಿನಲ್ಲಿ ಔಷಧವೂ ಒಂದು ಪ್ರಮುಖ ಭಾಗವಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಿದೆ ಎಂದು ಎಸಿ ಮಹೆಬೂಬ್ ಜಿಲಾನಿ ಖುರೇಷಿ ಅಭಿಪ್ರಾಯಪಟ್ಟರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಶ್ರೀರಾಮ ಬಡಾವಣೆಯಲ್ಲಿ ನಿರ್ಮಿಸಿರುವ ಔಷಧ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ. ಪ್ರಸ್ತುತ ದಿನಗಳಲ್ಲಿ ಆಹಾರದಷ್ಟೇ ಪ್ರಾಮುಖ್ಯತೆಯನ್ನು ಔಷಧಕ್ಕೂ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ. ಯಾವುದೇ ರೋಗಿ ಕ್ಲಿನಿಕ್, ಮಳಿಗೆಗಳಲ್ಲಿ ಔಷಧ ಪಡೆಯುವಾಗ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಆಗ ಮಾತ್ರ ಬಹುಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ವೈದ್ಯರು ಚೀಟಿಯಲ್ಲಿ ಬರೆದ ಔಷಧ ಹೊರತು ಪರ್ಯಾಯವಾಗಿ ಬೇರೆಯದ್ದನ್ನು ನೀಡಬಾರದು. ಇತ್ತೀಚೆಗೆ ನಕಲಿ ಔಷಧಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಇಂತಹ ಪ್ರಕರಣ ಕಂಡುಬಂದಲ್ಲಿ ಮಾಹಿತಿ ಕೊಡುವಂತೆ ಮನವಿ ಮಾಡಿದರು.
ಸಹಾಯಕ ಔಷಧ ನಿಯಂತ್ರಕ ಕೆಂಪಯ್ಯ ಸುರೇಶ್ ಮಾತನಾಡಿ, ಭವನ ಉತ್ತಮವಾಗಿದ್ದು, ಸದುಪಯೋಗ ಆಗಬೇಕು. ಸರ್ಕಾರದಿಂದ ಜಾರಿಯಾಗುವ ಆದೇಶಗಳನ್ನು ಸಕಾಲಕ್ಕೆ ಸದಸ್ಯರಿಗೆ ತಲುಪಿಸುವ ಮೂಲಕ ಸೂಕ್ತ ವ್ಯಾಪಾರ ಚಟುವಟಿಕೆಗೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಔಷಧ ಉದ್ಯಮಸಲ್ಲಿ ಅನ್ಯ ರಾಜ್ಯಗಳು ಮುಂದಿವೆ. ಕರ್ನಾಟಕ ಹಿಂದಿದೆ. ಆದ್ದರಿಂದ ಪ್ರಗತಿ ಸಾಧಿಸಬೇಕಿದೆ ಎಂದು ತಿಳಿಸಿದರು.
ಇಲಾಖೆಯ ವೆಬ್‌ಸೈಟ್ ನಿತ್ಯ ನೋಡುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಎಫ್‌ಒಪಿಇ ಅಧ್ಯಕ್ಷ ಹರೀಶ್ ಜೈನ್ ಮಾತನಾಡಿ, ಸಂಘಕ್ಕೆ ಕಟ್ಟಡ ಗೌರವದ ಸಂಕೇತ. ಇಲ್ಲಿ ಪ್ರತಿ ತಿಂಗಳು ಸಭೆ ಆಯೋಜಿಸಿ, ವೃತ್ತಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಬೇಕು. ದೇಶ, ಸಮಾಜ ಮತ್ತು ವೃತ್ತಿಯ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ಸಮಸ್ಯೆ ಅಧಿಕಾರಿಗಳ ಬಳಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳುವಂತೆ ಕಿವಿಮಾತು ಹೇಳಿದರು.
ಕೆಪಿಆರ್‌ಡಿಒ ಅಧ್ಯಕ್ಷ ಸಿ. ಜಯರಾಮ್ ಮಾತನಾಡಿ, ಶೀಘ್ರ ರಾಜ್ಯ ಮಟ್ಟದಲ್ಲೂ ಔಷಧ ಭವನ ನಿರ್ಮಾಣವಾಗಬೇಕಿದೆ. ಕೋವಿಡ್ ವೇಳೆ ಔಷಧ ವಿತರಕರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಗುರುತಿಸುವ ಕೆಲಸ ಮಾಡಲಿಲ್ಲ. ಅಲ್ಲದೆ, 30 ಮಂದಿ ಮೃತಪಟ್ಟಿದ್ದು, ಪರಿಹಾರ ನೀಡಲಿಲ್ಲ. ಆ ಕಾರ್ಯವನ್ನು ನಮ್ಮ ಸಂಸ್ಥೆ ಮಾಡಿದೆ. ತಲಾ 3 ಲಕ್ಷ ರೂ.ನಂತೆ 90 ಲಕ್ಷ ರೂ. ಪರಿಹಾರ ನೀಡಲಾಯಿತು ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ಔಷಧಗಳ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ದೂರು, ಸಾಕ್ಷಿ ಒದಗಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾನೂನು ಪಾಲಿಸಿ ವ್ಯಾಪಾರ ಮಾಡುವವರಿಗೆ ಸಂಘ ಸದಾ ಶ್ರೀರಕ್ಷೆಯಾಗಿರಲಿದೆ ಎಂದು ಹೇಳಿದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಹೆಚ್ಚುವರಿ ಔಷಧ ನಿಯಂತ್ರಕ ಡಾ.ಎಸ್. ಉಮೇಶ್ ಸಮಾರಂಭ ಉದ್ಘಾಟಿಸಿದರು. ದಾವಣಗೆರೆ ಪ್ರಾದೇಶಿಕ ಕಚೇರಿ ಉಪ ಔಷಧ ನಿಯಂತ್ರಕ ಡಾ.ಎಂ. ಖಲಿದ್ ಅಹ್ಮದ್‌ಖಾನ್, ಚಿತ್ರದುರ್ಗ ವೃತ್ತದ ಸಹಾಯಕ ಔಷಧ ನಿಯಂತ್ರಕ ಸಿ.ಎಚ್. ಗಿರೀಶ್, ಕೆಸಿಡಿಎ ಮಾಜಿ ಅಧ್ಯಕ್ಷ ಕೆ.ಇ. ಪ್ರಕಾಶ್, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್. ಓಂಕಾರಮೂರ್ತಿ, ಎಸ್‌ಜೆಎಂ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ್ಯ ಡಾ.ಟಿ.ಎಸ್. ನಾಗರಾಜ್, ಸಚಿನ್ ಆಚಾರ್ಯ, ಬೆಂಗಳೂರಿನ ಗ್ರೂಪ್ ಫಾರ್ಮಾಸ್ಯೂಟಿಕಲ್ಸ್‌ನ ಉಪಾಧ್ಯಕ್ಷ ಡಾ. ಸುನೀಲ್ ಎಸ್. ಚಿಪ್ಲ್ಲುಂಕರ್, ಜಿಲ್ಲಾ ಸಂಘದ ಕಾರ್ಯದರ್ಶಿ ಚಂದ್ರಮೋಹನ್ ರೆಡ್ಡಿ, ಉಪಾಧ್ಯಕ್ಷ ಎಸ್. ವೀರೇಶ್, ಸಹ ಕಾರ್ಯದರ್ಶಿ ಬಿ.ಟಿ. ಬಸವರಾಜು ಇತರರಿದ್ದರು.