ಜಿಲ್ಲೆ

ಔರಾದ್​ಗೆ 182 ಕೋಟಿ ರೂ. ಮಂಜೂರು

ಔರಾದ್: ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆಯಡಿ ಔರಾದ್ ಕ್ಷೇತ್ರಕ್ಕೆ 182 ಕೋಟಿ ರೂ. ಮಂಜೂರಾಗಿದ್ದು, ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜನಸಂಖ್ಯೆ ಹೆಚ್ಚುತ್ತಿದ್ದಂತೆ ನೀರಿನ ಸಮಸ್ಯೆಯೂ ಅಧಿಕವಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಪ್ರತಿ ಹಳ್ಳಿಗೆ ಕುಡಿಯುವ ನೀರು ಒದಗಿಸಬೇಕೆಂಬ ಆಶಯದೊಂದಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಲಜೀವನ ಮಿಷನ್ ಜಾರಿಗೆ ತಂದಿದ್ದಾರೆ ಎಂದು ಹೇಳಿದ್ದಾರೆ.

ಮೂರು ಸಲ ಚುನಾಯಿಸಿದ ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅದರಂತೆ ಎಲ್ಲರಿಗೂ ನೀರು ತಲುಪಿಸುವುದು ಮೊದಲ ಆದ್ಯತೆ. ಬೇಸಿಗೆಯಲ್ಲಿ ಕಂಡುಬರುವ ನೀರಿನ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿಸಿ ಹೆಚ್ಚಿನ ಅನುದಾನ ಮಂಜೂರು ಮಾಡಿಸಿದ್ದೇನೆ. ಮೊದಲ ಹಂತದ ಕೆಲಸ ಚಾಲ್ತಿಯಲ್ಲಿದ್ದು, ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತಾಲೂಕಿನ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ಈ ಯೋಜನೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಪೈಪ್​ಲೈನ್ ಕೆಲಸ ಸರಿಯಾಗಿ ಆಗಬೇಕು. ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಕೆಲಸ ಆರಂಭಿಸಬೇಕು. ಅಂತರ್ಜಲ ಮಟ್ಟ ಸಾಕಷ್ಟು ಕುಸಿದಿದ್ದರಿಂದ ಕೊಳವೆ ಬಾವಿಗಳಲ್ಲಿ ಕೆಲ ದಿನಗಳಲ್ಲೇ ನೀರು ಬತ್ತುವ ಸಾಧ್ಯತೆ ಹೆಚ್ಚಾಗಿದ್ದರಿಂದ ತೆರೆದ ಬಾವಿಗಳ ಮೂಲಕ ಯೋಜನೆ ಆರಂಭಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಸರಿಯಾಗಿ ಕೆಲಸ ಮಾಡದವರ ಬಿಲ್ ತಡೆಹಿಡಿದು ಕಪ್ಪು ಪಟ್ಟಿಗೆ ಸೇರಿಸಬೇಕು. ಕಾಮಗಾರಿ ಪರಿಶೀಲನೆ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು. ಜಿಪಂ ಸಿಇಒ ಕುಡಿಯುವ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವಂತೆ ನಿಗಾ ಇರಿಸಬೇಕೆಂದು ಸೂಚಿಸಿದ್ದಾರೆ.

ನರ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಲಜೀವನ ಮಿಷನ್ ಜಾರಿಗೆ ತರಲಾಗಿದೆ. ಸಾರ್ವಜನಿಕರು ಸಹ ಮುತುವಜರ್ಿ ವಹಿಸಿ ತಮ್ಮೂರಿನಲ್ಲಿ ಜೆಜೆಎಂ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು.
| ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ