ಔರಾದ್: ಗಣೇಶ ಚೌತಿ ನಿಮಿತ್ತ ಸಾರ್ವಜನಿಕ ಸ್ಥಳಗಳಲ್ಲಿ ಒಂಬತ್ತು ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ವಿಘ್ನೇಶ್ವರ ಮೂರ್ತಿಗಳ ವಿಸರ್ಜನೆ ಪಟ್ಟಣದಲ್ಲಿ ಗುರುವಾರ ತಡರಾತ್ರಿವರೆಗೆ ಸಂಭ್ರಮದಿಂದ ಜರುಗಿತು. ಎಲ್ಲ ಗಣೇಶ ಮೂರ್ತಿಗಳು ಎಪಿಎಂಸಿ ಯಿಂದ ಬಸವೇಶ್ವರ ವೃತ್ತದವರೆಗೆ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು, ಹಿರಿಯರು ಕಿರಿಕಿಯರು, ಹೆಣ್ಣು ಗಂಡು ಎನ್ನದೇ ಎಲ್ಲ ವಯೋಮಾನದವರು ಮೆರವಣಿಗೆ ವೀಕ್ಷಣೆಗೆ ಬಂದಿದ್ದರು. ತಡರಾತ್ರಿವರೆಗೆ ನಡೆದ ಮೆರವಣಿಗೆಯಲ್ಲಿ ಸಾಗಿ ಬಂದ ವಿನಾಯಕ ಮೂರ್ತಿಗಳನ್ನು ಕಣ್ಣುಂಬಿಕೊಂಡರು.
ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ತಹಸೀಲ್ದಾರ್ ಮಹೇಶ ಪಾಟೀಲ, ಸಿಪಿಐ ರಘವೀರಸಿಂಗ ಠಾಕೂರ್ ಸಾರಥ್ಯದಲ್ಲಿ ಹಾಗೂ ಎಲ್ಲ ಗಣೇಶ ಮಂಡಳಿಗಳ ಸಹಕಾರದಿಂದ ೯ ದಿನಗಳ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳ, ಡಿಜೆ ಹಾಗೂ ಧ್ವನಿವರ್ಧಕಗಳ ಅಬ್ಬರದ ಸಂಗೀತದ ಹಿಮ್ಮೇಳದೊಂದಿಗೆ ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು.
ಚನ್ನಬಸವೇಶ್ವರ ವೃತ್ತ, ಎಪಿಎಂಸಿ, ತಾಪಂ ಕಚೇರಿ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಗಾಂಧಿ ಚೌಕ ಮಾರ್ಗವಾಗಿ ಪಟ್ಟಣದ ಹೊರವಲಯದ ಕೆರೆಗೆ ವಿಸರ್ಜನೆಗೆ ತೆರಳಿದವು.
ವಿಶೇಷವಾಗಿ ಬಸವೇಶ್ವರ ವೃತ್ತದಲ್ಲಿ ತಾಲೂಕು ಆಡಳಿತದಿಂದ ವೇದಿಕೆ ಹಾಕಲಾಗಿತ್ತು, ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ ಬರುತ್ತಿದ್ದಂತೆ ಮೆರವಣಿಗೆ ರಂಗೇರುತ್ತಿತ್ತು. ಲೀಡಕರ ಕಾಲನಿ ಗಣೇಶ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ಸುಮಾರು ೩೦ ಜನರ ವಾದ್ಯ ಮೇಳದ ಕುಣಿತ ನೋಡಲು ಜನ ಕಿಕ್ಕಿರಿದು ನಿಂತಿದ್ದು ಕಂಡು ಬಂತು. ಬಳಿಕ ಗಾಂಧಿ ಚೌಕ ಮಾರ್ಗವಾಗಿ ಕೆರೆಗೆ ತಲುಪಿ, ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.