ಬೀದರ್: ಉಕ್ರೇನ್ ದೇಶದಲ್ಲಿ ನಡೆದಿತ್ತು ಎನ್ನಲಾದ ಔರಾದ್ ತಾಲೂಕಿನ ಹುಲ್ಯಾಳ ಗ್ರಾಮದ ವೈದ್ಯ ವಿದ್ಯಾರ್ಥಿ ಅಜಯಕುಮಾರ ರಾಠೋಡ್ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಶೀಘ್ರದಲ್ಲೇ ವಿದ್ಯಾರ್ಥಿ ತವರಿಗೆ ಮರಳುತ್ತಿರುವುದಾಗಿ ಔರಾದ್ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಅಜಯಕುಮಾರ ಅವರು ವೈದ್ಯಕೀಯ ವ್ಯಾಸಂಗಕ್ಕಾಗಿ 2020ರ ಡಿಸೆಂಬರ್ 13ರಂದು ಉಕ್ರೇನ್ ದೇಶಕ್ಕೆ ತೆರಳಿದ್ದರು. ಕಳೆದ ದಿ. 16 ರಂದು ಯಾರೋ ಅಪರಿಚಿತರು ಇವರಿಗೆ ಅಪಹರಣ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಇದು ಪಾಲಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ವಿಷಯ ಗೊತ್ತಾಗುತ್ತಲೇ ಕುಟುಂಬಸ್ಥರನ್ನು ಸಂಪರ್ಕಿಸಿ ಧೈರ್ಯ ತುಂಬಲಾಗಿತ್ತು. ಬೇಗ ವಾಪಸ್ ತರುವ ಭರವಸೆಯೂ ನೀಡಲಾಗಿತ್ತು. ರಾಜ್ಯ, ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ ನಂತರ ವಿದ್ಯಾರ್ಥಿ ಪತ್ತೆಯಾಗಿದ್ದು, ತವರಿಗೆ ತರುವ ಪ್ರಯತ್ನ ನಡೆದಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಪಹರಣ ವಿಷಯ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು, ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಅವರ ಮೂಲಕ ಉಕ್ರೇನ್ ರಾಯಭಾರ ಕಚೇರಿ ಸಂಪರ್ಕಿಸಲಾಯಿತು. ವಿದ್ಯಾರ್ಥಿ ಕಿರ್ಗಿಸ್ತಾನ್ದಲ್ಲಿರುವ ಮಾಹಿತಿ ಲಭ್ಯವಾಯಿತು. ನಂತರ ಕಿರ್ಗಿಸ್ತಾನ ರಾಯಭಾರ ಕಚೇರಿಗೆ ಸಂಪರ್ಕಿಸಿ, ವಿದ್ಯಾರ್ಥಿಯನ್ನು ಭಾರತಕ್ಕೆ ಕಳಿಸಲು ಮನವಿ ಮಾಡಿದ್ದು, ಕಿರ್ಗಿಸ್ತಾನದಿಂದ ಶೀಘ್ರ ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾರೆ.
ಅಪಹರಣವಾಗಿದ್ದ ವಿದ್ಯಾರ್ಥಿಯನ್ನು ಕೇವಲ ಮೂರು ದಿನಗಳಲ್ಲಿ ಪತ್ತೆ ಮಾಡಿ, ಮನೆಗೆ ಕರೆತರುವಲ್ಲಿ ಸಂಸದ ಭಗವಂತ ಖೂಬಾ ಅವರು ಸಾಕಷ್ಟು ಸಹಕಾರ ನೀಡಿದ್ದಾರೆ. ಎಸ್ಪಿ ಡಿ.ಎಲ್. ನಾಗೇಶ ಅವರು ಸಹ ಹೆಚ್ಚಿನ ಕಾಳಜಿ ವಹಿಸಿ ನೆರವಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಅಜಯಕುಮಾರ ಅಪಹರಣ ಎಲ್ಲಿ ಆಗಿತ್ತು? ಯಾರು ಒಯ್ದಿದ್ದರು? ಯಾವ ಕಾರಣಕ್ಕೆ ಇದು ನಡೆಯಿತು ಹಾಗೂ ಹೇಗೆ ಬಿಟ್ಟರು ಎಂಬಿತ್ಯಾದಿ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಜಯಕುಮಾರ ಇಲ್ಲಿಗೆ ಮರಳಿದ ನಂತರವೇ ನಾನಾ ವಿಷಯ ಗೊತ್ತಾಗಬಹುದು. ನಾಲ್ಕು ತಿಂಗಳ ಹಿಂದೆ ಭಾಲ್ಕಿ ತಾಲೂಕಿನ ವೈದ್ಯ ವಿದ್ಯಾರ್ಥಿಯೊಬ್ಬ ಉಕ್ರೇನ್ ನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವುದು ಇಲ್ಲಿ ಸ್ಮರಿಸಬಹುದು.
ಸುರಕ್ಷತೆ ಖಾತ್ರಿಪಡಿಸಿಕೊಳ್ಳಿ
ದೇಶದಲ್ಲಿರುವ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಬೇರೆ ದೇಶಗಳ ವಿದ್ಯಾರ್ಥಿಗಳು ಸಹ ಉನ್ನತ ವ್ಯಾಸಂಗಕ್ಕೆ ಭಾರತಕ್ಕೆ ಬರುತ್ತಿದ್ದಾರೆ. ಹೀಗಿರುವಾಗ ನಮ್ಮ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಒಂದೊಮ್ಮೆ ವಿದೇಶಕ್ಕೆ ಹೋಗುವ ಅನಿವಾರ್ಯತೆ ಇದ್ದಲ್ಲಿ, ಆ ದೇಶದ ವಿದೇಶಾಂಗ ನೀತಿ, ಸುರಕ್ಷತೆ ಮತ್ತು ಪ್ರವೇಶ ಬಯಸುವ ಕಾಲೇಜಿನ ಹಿನ್ನೆಲೆ ಮತ್ತು ಅಲ್ಲಿನ ಸೌಲಭ್ಯ ಬಗ್ಗೆ ತಿಳಿದುಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ಅಥವಾ ಏಜೆನ್ಸಿಗಳ ಆಕರ್ಷಕ ಸೌಲಭ್ಯಗಳಿಗೆ ಮಾರು ಹೋಗಿ ವಿದೇಶಗಳಿಗೆ ಹೋಗದಿರಿ ಎಂದು ಸಚಿವ ಪ್ರಭು ಚವ್ಹಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.