ಜಿಲ್ಲೆ

ಔರಾದ್ ರಸ್ತೆ ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿಲ್ಲ

ಬೀದರ್: ಔರಾದ್-ಬೀದರ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ-16ಎ ಎಂದು ಘೋಷಿಸಿ ನಾಲ್ಕು ವರ್ಷವಾಗಿದೆ. ಆದರೆ ಇನ್ನೂ ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ವಹಿಸಿಕೊಂಡಿಲ್ಲ ಎಂದು ಲೋಕೋಪಯೋಗಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಅಧಿವೇಶನದಲ್ಲಿ ಎಂಎಲ್ಸಿ ವಿಜಯಸಿಂಗ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, 45 ಕಿಮೀ ಉದ್ದದ ಔರಾದ್-ಬೀದರ್ ರಸ್ತೆಗೆ 2017ರ ಜನವರಿ 3ರಂದೇ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ಮೂಲ ಕೆಲಸ ಇನ್ನೂ ಶುರುವಾಗಿಲ್ಲ. ಮುಂಚೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದ್ದ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಕಲಬುರಗಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಗುತ್ತಿಗೆದಾರರ ನೇಮಕ ನಂತರವಷ್ಟೇ ಈ ಹೆದ್ದಾರಿಯನ್ನು ತನ್ನ ಸುಪರ್ದಿಗೆ ಪಡೆಯುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಳಿಸಿದ್ದಾರೆಂಬ ಮಾಹಿತಿ ನೀಡಿದ್ದಾರೆ.

ಹೆದ್ದಾರಿಯಲ್ಲಿ ಮೂಲ ಕಾಮಗಾರಿ ಕೈಗೊಳ್ಳಲಾಗಿಲ್ಲ. ಆದರೆ, ನಿರ್ವಹಣೆ ಮತ್ತು ಅಗತ್ಯ ದುರಸ್ತಿ ಕಾರ್ಯಕ್ಕೆ 2019-20 ರಲ್ಲಿ 1.23 ಕೋಟಿ ರೂ. ನೀಡಲಾಗಿದೆ. ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಿರುವಂತೆ ಮಾಡಲಾಗಿದೆ. ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕಳೆದ ಮೇ 14 ರಂದು ಈ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆದರೆ ಇನ್ನೂ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿಲ್ಲ. ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾಗಿಡುವುದಕ್ಕಾಗಿ ಆಯ್ದ ಭಾಗಗಳ ದುರಸ್ತಿಗಾಗಿ 77.39 ಲಕ್ಷ ರೂ. ಅನುದಾನ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

2013ರಿಂದ ಈವರೆಗೆ ಈ ಹೆದ್ದಾರಿ ಅಭಿವೃದ್ಧಿಗೆ ಸಾಕಷ್ಟು ಹಣ ವೆಚ್ಚವಾಗಿದೆ. ಲೋಕೋಪಯೋಗಿ ಇಲಾಖೆಯಿಂದ 2.33 ಕೋಟಿ ರೂ., ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 28.10 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 2019ರಲ್ಲಿ 1.23 ಕೋಟಿ ರೂ. ವೆಚ್ಚದಲ್ಲಿ ನಿರ್ವಹಣೆ ಮತ್ತು ದುರಸ್ತಿ ಕೈಗೊಳ್ಳಲಾಗಿದೆ ಎಂದು ಕಾರಜೋಳ ವಿವರ ನೀಡಿದ್ದಾರೆ.

ಕೌಠಾ ಸೇತುವೆ ಸಂಪರ್ಕ ರಸ್ತೆಯು ಕುಸಿದಿದ್ದು, ಅದರ ಪುನರ್ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 1.33 ಕೋಟಿ ರೂ. ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಟೆಂಡರ್ ಪ್ರಗತಿಯಲ್ಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೆದ್ದಾರಿ ಪ್ರಾಧಿಕಾರ ಈ ರಸ್ತೆ ತನ್ನ ಸುಪರ್ದಿಗೆ ಪಡೆಯಲಿದೆ. ಹೆದ್ದಾರಿಯು ಮೇಲ್ದರ್ಜೆಗೇರಿಸುವ ಕಾಮಗಾರಿ ಅವಧಿ 24 ತಿಂಗಳು ಆಗಿದೆ ಎಂದು ತಿಳಿಸಿದ್ದಾರೆ.