ಜಿಲ್ಲೆ

ಔರಾದ್-ಬೀದರ್ ರಸ್ತೆ ರಿಪೇರಿಗೆ ರೂ. 1.10 ಕೋಟಿ ಪ್ರಸ್ತಾವನೆ

ಬೀದರ್: ಬೀದರ್-ಔರಾದ್ ರಸ್ತೆ ಸರಿಪಡಿಸಲು 1.10 ಕೋಟಿ ರೂ. ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ. ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕೆಲವು ದಿನಗಳಿಂದ ಸಾಕಷ್ಟು ಹಾಳಾಗಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವುದು ಗಮನಿಸಲಾಗಿದೆ. ಸಾರ್ವಜನಿಕರಿಂದ ಸಹ ಸಾಕಷ್ಟು ದೂರುಗಳು ಬಂದಿವೆ. ಔರಾದ್-ಬೀದರ್ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು, ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ವಿಳಂಬವಾಗುತ್ತಿದೆ. ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗದಂತೆ ರಸ್ತೆಯ ದುರಸ್ತಿಗೆ ತಕ್ಷಣ ಕ್ರಮ ಜರುಗಿಸುವಂತೆ ಸಂಸದ ಭಗವಂತ ಖೂಬಾ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಸಂಸದರು ಸಹ ವೈಯಕ್ತಿಕ ಮುತುವರ್ಜಿ ವಹಿಸಿ ರಸ್ತೆ ದುರಸ್ತಿಗೆ ಶೀಘ್ರ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರ ಗಮನವನ್ನು ಸೆಳೆದಿದ್ದಾರೆ. ಹೀಗಾಗಿ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಆದಷ್ಟು ಶೀಘ್ರ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸದ್ಯಕ್ಕೆ ಕೌಠಾ ಸೇತುವೆಯ ಮೇಲಿಂದ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೌಠಾ ಸೇತುವೆಗೆ ಹೆಚ್ಚು ನೀರು ಹರಿದು ಬಂದರೆ ಆಗುವ ಅನಾಹುತ ತಪ್ಪಿಸಲು ಮುಂಜಾಗ್ರತೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಗೆ ಬೇಗ ಮಂಜೂರಾತಿ ಸಿಗುವ ನಿಟ್ಟಿನಲ್ಲಿ ಸಂಸದರು ಪ್ರಯತ್ನಿಸುತ್ತಿದ್ದಾರೆ. ಮಂಜೂರಾತಿ ಬೇಗ ಸಿಕ್ಕು ಕಾಮಗಾರಿಯನ್ನು ಆದಷ್ಟು ಶೀಘ್ರ ಪ್ರಾರಂಭ ಮಾಡಲಾಗುವುದು ಎಂದು ಚವ್ಹಾಣ್ ತಿಳಿಸಿದ್ದಾರೆ.