ಔರಾದ್: ಪಟ್ಟಣದ ಜನರ ಬಹುದಿನಗಳ ನಿರೀಕ್ಷೆಯಂತೆ ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗುವ ದಿನಗಳು ಸನ್ನಿಹಿತವಾಗಿದ್ದು, ಶೀಘ್ರದಲ್ಲಿ ಘೋಷಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.
ಪಟ್ಟಣದಲ್ಲಿ ಇತ್ತೀಚೆಗೆ 15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವೆ. ಶೀಘ್ರದಲ್ಲಿ ಇದು ಪುರಸಭೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಔರಾದ್ ಸ್ವಚ್ಛ ಮತ್ತು ಸುಂದರ ಪಟ್ಟಣವನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಇದಕ್ಕೆ ಪೂರಕವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬಹುದಿನಗಳ ವರ್ಷಗಳ ನಂತರ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಕ್ಕೆ ಬಿಜೆಪಿ ಬಂದಿದೆ. ಪಟ್ಟಣದಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದರು.
ಸ್ವಚ್ಛ ಹಾಗೂ ಸುಂದರ ಕನಸು ನನಸಾಗುವ ಎಲ್ಲ ರೀತಿಯ ಕಾರ್ಯ ಯೋಜನೆಗಳು ಈಗಾಗಲೇ ಮಂಜೂರಾಗಿದ್ದು, ಇದಕ್ಕೆ ಪೂರಕವಾಗಿ ಔರಾದ್ ಪಟ್ಟಣದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡಲಾಗುವುದು ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 700ಕ್ಕೂ ಅಧಿಕ ಮನೆಗಳು ಮಂಜೂರಾಗಿದ್ದು, ಯಾರೊಬ್ಬರೂ ಲಂಚ ನೀಡದೆ ಯೋಜನೆ ಲಾಭ ಪಡೆದುಕೊಳ್ಳಬೇಕು. ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪಪಂ ಸದಸ್ಯರು ಜನರಿಗಾಗಿ ಅಭಿವೃದ್ಧಿ ಕೆಲಸ ಮಾಡಿ ಎಂದರು.
ಪಪಂ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ, ಉಪಾಧ್ಯಕ್ಷ ಸಂತೋಷ ಪೋಕಲವಾರ, ಜಿಪಂ ಮಾಜಿ ಸದಸ್ಯ ವಸಂತ ಬಿರಾದಾರ, ಪಪಂ ಮುಖ್ಯಾಧಿಕಾರಿ ಚಾಂದ್ ಪಟೇಲ್, ಸಂಜುಕುಮಾರ ವಡೆಯರ್ ಇತರರಿದ್ದರು.
ಔರಾದ್ ಗೆ ಕಾರಂಜಾದಿಂದ ನೀರು
ತಾಲೂಕಿನ ಬೋರಾಳ, ತೆಗಂಪುರ ಮತ್ತು ಹಾಲಹಳ್ಳಿ ಕುಡಿಯುವ ನೀರು ಯೋಜನೆಗಳಿಂದ ಔರಾದ್ ಪಟ್ಟಣದ ಜನತೆಗೆ ನೀರು ಪೂರೈಸಲು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ರೂ. 77 ಕೋಟಿ ವೆಚ್ಚದಲ್ಲಿ ಕಾರಂಜಾ ಜಲಾಶಯದಿಂದ ನೀರು ತರಲು ಕ್ರಮ ವಹಿಸಲಾಗಿದೆ ಎಂದು ಸಚಿವ ಚವ್ಹಾಣ್ ಹೇಳಿದರು. ಈಗಾಗಲೇ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಕುರಿತು ಅಂದಾಜು ವೆಚ್ಚದೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪಟ್ಟಣದ ಎಲ್ಲ ವಾಡ್೯ಗಳಿಗೆ ನೀರು ಪೂರೈಸುವ ಪೈಪ್ ಲೈನ್ ಪೂರ್ಣ ಕೆಟ್ಟಿದ್ದರಿಂದ ಹೊಸ ಪೈಪ್ ಲೈನ್ ಗಾಗಿ ಅನುದಾನ ಮಂಜೂರಾಗಿದೆ ಎಂದರು.