ಔರಾದ್: ತಾಲೂಕಿನ ಹೆಡಗಾಪುರ ಮತ್ತು ರಕ್ಷಾಳ್ ಗ್ರಾಮಗಳ ನಡುವಿನ ಅರಣ್ಯದಲ್ಲಿ ಬೆಂಗಾಲ್ ಮೂಲದ ವನ್ಯ ಜೀವಿ ನರಿ(ವಲ್ಪೆಸ್ ಬೆಂಗಾಲೆನ್ಸಿಸ್) ಪತ್ತೆಯಾಗಿದೆ. ಸಂತಪುರ ಉಪ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರೆ ತಮ್ಮ ಕ್ಯಾಮರಾದಲ್ಲಿ ಅಳಿವಿನಂಚಿನಲ್ಲಿರುವ ಈ ನರಿಗಳ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಹಿಮಾಲಯ, ಅರುಣಾಚಲ ಪ್ರದೇಶ, ಬಂಗಾಲಗಳಲ್ಲಿ ಬೆಂಗಾಲ್ ನರಿಗಳ ಸಂತತಿ ಹೆಚ್ಚಾಗಿ ಇದೆ. ಈ ಭಾಗದಲ್ಲಿ ಮೊಟ್ಟ ಮೊದಲ ಬಾರಿ ಪತ್ತೆಯಾಗಿವೆ. ತಾಲೂಕಿನಲ್ಲಿ 1500 ಹೆಕ್ಟೇರ್ ಅರಣ್ಯ ಪ್ರದೇಶವಿರುವುದರಿಂದ ವನ್ಯಜೀವಿಗಳು, ಪ್ರಾಣಿ-ಪಕ್ಷಿಗಳು ವಲಸೆ ಬಂದು, ಇಲ್ಲಿಯೇ ಅವುಗಳ ಸಂತತಿ ಬೆಳೆಸುತ್ತಿವೆ. ಚಿಕ್ಕ ಹುಳು, ಮೀನುಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡು ಜೀವಿಸುವ ಈ ಪುಟ್ಟ ಜಾತಿಯ ಬೆಂಗಾಲ್ ನರಿಗಳು ಹೆಡಗಾಪುರ, ಆಲೂರ್ ಸುತ್ತಮುತ್ತಲಿನ ಬಯಲು ಪ್ರದೇಶದ ಗುಹೆಗಳಲ್ಲಿ ವಾಸ ಮಾಡುತ್ತಿವೆ. ಮನುಷ್ಯರನ್ನು ಕಂಡರೆ ಅತೀವ ಭಯಪಡುವ ಈ ಪ್ರಾಣಿ, ಚುರುಕು ಮತ್ತು ನಾಜೂಕು ಕೂಡ ಆಗಿರುತ್ತದೆ.
ಈ ವನ್ಯಜೀವಿಗಳು ಹೆಚ್ಚಾಗಿ ಹುಲ್ಲುಗಾವಲಿನ ನಿರ್ಜನ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತಾಲೂಕಿನೆಲ್ಲೆಡೆ ಅರಣ್ಯ ಪ್ರದೇಶ ಮತ್ತು ಅವುಗಳಿಗೆ ಅರಣ್ಯ ಇಲಾಖೆಯಿಂದ ನೀರಿನ ವ್ಯವಸ್ಥೆ ಸಹ ಇರುವುದರಿಂದ ಈ ಭಾಗಕ್ಕೆ ಆಗಮಿಸಿವೆ. ನೋಡಲು ಅತ್ಯಂತ ಮನಮೋಹಕವಾಗಿದ್ದು, ಧ್ವನಿ ಮತ್ತು ನೆಗೆತ ಮನಸ್ಸಿಗೆ ಮುದ ನೀಡುತ್ತದೆ. ರೈತರು ಯಾವುದೇ ಕಾರಣಕ್ಕೂ ತಮ್ಮ ಹೊಲಗದ್ದೆಗಳಲ್ಲಿ ಬೆಂಕಿ ಹಚ್ಚಬಾರದು. ಇದರಿಂದ ಬೆಂಕಿಯ ಕೆನ್ನಾಲಗೆ ಅರಣ್ಯಕ್ಕೆ ವ್ಯಾಪಿಸಿ ವನ್ಯಜೀವಿ ಸಂಕುಲ ನಾಶವಾಗುವ ಆತಂಕವಿರುತ್ತದೆ ಎಂದು ಮಚಕುರೆ ತಿಳಿಸಿದ್ದಾರೆ.
ಈ ಭಾಗದಲ್ಲಿ ಕರಿ ನವಿಲು (ಲೆಸ್ಸರ್ ಫ್ಲೋರಿಕಾನ್), ನೀಲ್ಗಾಯ್ ಜತೆಗೆ ಇದೀಗ ಬೆಂಗಾಲ್ ನರಿಗಳು ಪತ್ತೆಯಾಗಿದ್ದು, ವನ್ಯಜೀವಿ ಹವ್ಯಾಸಿಗರಿಗೆ ಹಾಗೂ ಪರಿಸರಪ್ರೀಯರಿಗೆ ಸಂತಸ ತಂದಿದೆ.