ಔರಾದ್: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರ ಕನಸಿನ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಯೋಜನೆಯಡಿ ಗೋಶಾಲೆ ನಿಮರ್ಾಣದ ಭೂಮಿ ಪೂಜೆ ಐತಿಹಾಸಿಕ ಸಮಾರಂಭವು ಶನಿವಾರ ನಡೆಯಿತು. ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಪ್ರಾಣಿ ದಯಾ ಸಂಘದ ಆಶ್ರಯದಲ್ಲಿ ಚವ್ಹಾಣ್ ಅವರ ತವರು ಕ್ಷೇತ್ರ ಔರಾದ್ ತಾಲೂಕಿನ ಹೆಡಗಾಪುರದಲ್ಲಿ ಗೋಶಾಲೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿತು.
ಗ್ರಾಮದ ಹೊರವಲಯದ ಸರ್ಕಾರದ 33 ಎಕರೆಯ ಗೋಮಾಳ ಜಮೀನಿನ ವಿಶಾಲ ಜಾಗದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೋಶಾಲೆ ನಿಮರ್ಾಣಕ್ಕೆ ಸಚಿವರು ವಿದ್ಯುಕ್ತ ಚಾಲನೆ ನೀಡಿದರು. ಇದಕ್ಕೂ ಮೊದಲು ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳಲ್ಲಿ ಸಚಿವರು ಭಾಗಿಯಾಗಿ ಗಮನ ಸೆಳೆದರು.
ನಂತರ ಮಾತನಾಡಿದ ಸಚಿವರು, ನಾನು ಪಶು ಸಂಗೋಪನೆ ಸಚಿವನಾದ ಕೂಡಲೇ ದೇಶದ ಗಮನ ಸೆಳೆದ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿ ಮಾಡಿ ಗೋ ಸಂರಕ್ಷಣೆಗೆ ಒತ್ತು ಕೊಟ್ಟಿರುವೆ. ಗೋವುಗಳ ಪಾಲನೆ, ಪೋಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೋಶಾಲೆಗಳು ನಿರ್ಮಾಣವಾಗಲಿವೆ. ರಾಜ್ಯಾದ್ಯಂತ ಗೋಶಾಲೆಗಳ ನಿಮರ್ಾಣಕ್ಕೆ ಚಾಲನೆ ಕೊಡುವ ಈ ಕಾರ್ಯಕ್ರಮವು ಸಹ ಬೀದರ್ನಿಂದ ಆರಂಭವಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಔರಾದ್ ತಾಲೂಕಿನಲ್ಲಿ 10 ಎಕರೆ ವಿಶಾಲ ಪ್ರದೇಶದಲ್ಲಿ ಗೋಶಾಲೆ ನಿಮರ್ಾಣವಾಗಲಿದೆ. 36 ಕೋಟಿ ರೂ. ವೆಚ್ಚದಲ್ಲಿ ಜಾನುವಾರು ಸಂವರ್ಧನಾ ಕೇಂದ್ರ ನಿರ್ಮಾಣವಾಗುತ್ತಿದೆ. 2 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಹೈಟೆಕ್ ಪಶು ಆಸ್ಪತ್ರೆ ನಿಮರ್ಾಣವಾಗುತ್ತಿದೆ. ಇಂಥ ಅನೇಕ ಮಹತ್ವದ ಕಾರ್ಯಕ್ರಮಗಳ ಅನುಷ್ಠಾನವು ನನ್ನ ಅವಧಿಯಲ್ಲಿ ಆಗುತ್ತಿವೆ ಎಂದು ತಿಳಿಸಿದರು.
ಪ್ರಭು ಜೀ ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ನನ್ನ ಸಮಾಜಪರವಾದ ವಿವಿಧ ಬೇಡಿಕೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿ ಪ್ರೋತ್ಸಾಹಿಸುತ್ತಿದ್ದಾರೆ. ನಾನು ತಿಳಿಸಿದ 12ಕ್ಕಿಂತ ಹೆಚ್ಚು ಬೇಡಿಕೆಗಳಿಗೆ ಸಿಎಂ ಸ್ಪಂದಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಕಷ್ಟು ಜನರು ಗೋವುಗಳ ಸಾಕಣೆ ಮಾಡುತ್ತ ಸೆಗಣಿ ಮತ್ತು ಗೋಮೂತ್ರದಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಿ ಉಪಜೀವನ ನಡೆಸುತ್ತಿದ್ದಾರೆ. ಬೀದರ್ ಜಿಲ್ಲೆಯ ಜನರು ಸಹ ಇಂಥ ಹೊಸಹೊಸ ಪ್ರಯೋಗಗಳನ್ನು ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಶಿವಲಿಂಗ ಶಿವಾಚಾರ್ಯರು, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಶಂಭುಲಿಂಗ ಶಿವಾಚಾರ್ಯರು, ರಾಜ್ಯ ಪ್ರಾಣಿ ದಯಾ ಸಂಘದ ಬಂಡೆಪ್ಪ ಕಂಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರತೀಕ್ ಚವ್ಹಾಣ್, ಶಿವಾಜಿ ಬೋಸಲೆ, ಕಿರಣ್ ಪಾಟೀಲ್, ಶ್ರೀಮಂತ ಪಾಟೀಲ್ ಹೆಡಗಾಪುರ, ಶಿವಾಜಿರಾವ ಕಾಳೆ, ಮಾರುತಿ ಚವ್ಹಾಣ್, ದೋಂಡಿಬಾ ನಾಯಕ, ರಾವಸಾಬ್ ಪಾಟೀಲ್ ಜಕನಾಳ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಡಿಡಿ ಮಲ್ಲಿಕಾಜರ್ುನ ಹಂಚಿನಾಳ, ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಡಾ.ರವಿ ಭೂರೆ, ಡಾ.ರಾಜಕುಮಾರ ಬಿರಾದಾರ ಇತರರಿದ್ದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ ಪ್ರಾಸ್ತಾವಿಕ ಮಾತನಾಡಿದರು. ಯುವ ಮುಖಂಡ ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು.
ಗೋಮಾತೆ ಮನೆಗೆ ಮಹಾಲಕ್ಷ್ಮೀ ಇದ್ದಂತೆ. ಗೋಮಾತೆಯನ್ನು ರಕ್ಷಣೆ ಮಾಡಿ ಪೂಜಿಸಿದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಗೋವುಗಳನ್ನು ಕಸಾಯಿಖಾನೆಗಳಿಗೆ ಸಾಗಿಸಬಾರದು. ಗೋವುಗಳ ಸಂರಕ್ಷಣೆ ಮಾಡಬೇಕು.
| ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ
ರಾಜ್ಯಾದ್ಯಂತ ಪ್ರವಾಸ: ಪಶು ಸಂಗೋಪನೆ ಸಚಿವನಾದ ಬಳಿಕ ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಶುಪಾಲನಾ ವ್ಯವಸ್ಥೆಯನ್ನು ನೋಡಿದ್ದೇನೆ. ಮುಖ್ಯವಾಗಿ ಯೋಜನೆಗಳ ಅನುಷ್ಠಾನದಲ್ಲಿ ಸಕ್ರಿಯ ಭಾಗಿಯಾಗುವ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಂಬಡ್ತಿ ನೀಡಿ ಪ್ರೋತ್ಸಾಹಿಸಲಾಗಿದೆ. ಪಶು ಸಂಜೀವಿನಿ ಯೋಜನೆ ಜಾರಿ ಮಾಡಿ ಜನತೆಗೆ ಸಾಕಷ್ಟು ಅನುಕೂಲ ಕಲ್ಪಿಸಲಾಗಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.