ಜಿಲ್ಲೆ

ಔರಾದ್, ಕಮಲನಗರ ಅತಿವೃಷ್ಟಿ ಪ್ರದೇಶ ಘೋಷಿಸಿ

ಔರಾದ್: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಬೆಂಗಳೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅತಿವೃಷ್ಟಿಯಿಂದಾಗಿ ಔರಾದ್(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಚರ್ಚಿಸಿದರು.

ಬೀದರ್ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಔರಾದ್ ಹಾಗೂ ಕಮಲನಗರ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ರಸ್ತೆ, ಬ್ರಿಜ್ ಕಂ ಬ್ಯಾರೇಜ್, ಕೆರೆ-ಕಟ್ಟೆಗಳು ಹಾಳಾಗಿದ್ದು, ಮಳೆ ನೀರು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.

ಬಿತ್ತನೆಯಾದ ಸೋಯಾಬೀನ್ ಹಾಗೂ ಇತರ ಬೆಳೆಗಳು ನಾಶವಾಗಿ ರೈತರು ಆಥರ್ಿಕ ನಷ್ಟ ಎದುರಿಸುತ್ತಿದ್ದಾರೆ. ನೂರಾರು ಮನೆಗಳು ಕುಸಿದು ಬಿದ್ದಿದ್ದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ. ಪ್ರವಾಹದಲ್ಲಿ ಇಬ್ಬರು ಮರಣ ಹೊಂದಿದ್ದಾರೆ ಎಂದು ಸಚಿವರು ಕ್ಷೇತ್ರದಲ್ಲಾದ ಹಾನಿಯ ಬಗ್ಗೆ ಮನವರಿಕೆ ಮಾಡಿದರು.

ಔರಾದ್ ಹಾಗೂ ಕಮಲನಗರ ಎರಡೂ ತಾಲೂಕುಗಳನ್ನು ಕೂಡಲೇ ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ, ತುರ್ತು ಪರಿಹಾರಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಚವ್ಹಾಣ್ ತಿಳಿಸಿದ್ದಾರೆ.