ಜಿಲ್ಲೆ

ಓವರ್‌ಹೆಡ್ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನ, ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ವಿರುದ್ಧ ವಂಚನೆ ಆರೋಪ

ದೊಡ್ಡಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೊಂಡವೆನಕಹಳ್ಳಿಯ ನಿವಾಸಿ, ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಅವರು ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅವರ ಸಂಬಂಧಿಕರು ಎನ್ನಲಾದ ಅದೇ ಗ್ರಾಮದ ಆಂಜನೇಯ ರೆಡ್ಡಿ ಕುಟುಂಬದ ಸದಸ್ಯರು ಪಟ್ಟಣದ ಜೆಕೆವಿ ಬಡಾವಣೆಯಲ್ಲಿರುವ ಓವರ್‌ಹೆಡ್ ಟ್ಯಾಂಕ್ ಏರಿ ಸಾಮೂಹಿಕ ಆತ್ಮಹತ್ಯೆ ಬೆದರಿಕೆ ಹಾಕಿದ ಪ್ರಸಂಗ ಭಾನುವಾರ ನಡೆಯಿತು.

ಕೋನಪ್ಪರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿ ವಿವಾದ ಇತ್ಯರ್ಥದ ಭರವಸೆ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದ ನಾಲ್ವರು ಪುರುಷರು, ನಾಲ್ವರು ಮಹಿಳೆಯರು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನವೊಲಿಸಿ ಎಲ್ಲರನ್ನು ಕೆಳಗಿಳಿಸಿ, ಮಾತುಕತೆಗೆಂದು ಮೂವರು ಪುರುಷರನ್ನು ಠಾಣೆಗೆ ಕರೆದೊಯ್ದರು.

ದೊಡ್ಡಬಳ್ಳಾಪುರದಲ್ಲಿ ಜೆಕೆವಿ ಬಡಾವಣೆ ಮಾಡಲು ಕೋನಪ್ಪರೆಡ್ಡಿ ಅವರಿಗೆ ನಿವೇಶನ ಹಾಗೂ ಜಮೀನು ಮಾರಿ ಸುಮಾರು 40 ಲಕ್ಷ ರೂ. ಹಣ ನೀಡಿದ್ದೆವು. ಇದುವರೆಗೂ ಅವರು ಹಣ ನೀಡಿಲ್ಲ. ಪರ್ಯಾಯವಾಗಿ ಭೂಮಿ ಕೊಟ್ಟಿಲ್ಲ. ಈ ಬಗ್ಗೆ ಚಿಂತಾಮಣಿ ಠಾಣೆಗೆ ದೂರು ನೀಡಲು ಹೋದರೂ ಸ್ವೀಕರಿಸುತ್ತಿಲ್ಲ. ಹಾಗಾಗಿ ನಾವೆಲ್ಲ ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ಆಂಜನೇಯರೆಡ್ಡಿ ತಿಳಿಸಿದರು.