ಜಿಲ್ಲೆ

ಓಲ್ಡ್ ಮಕ್ನಾ ಆಪರೇಷನ್ ಯಶಸ್ವಿ

ಹಾಸನ/ ಸಕಲೇಶಪುರ: ಮಲೆನಾಡು ಭಾಗದಲ್ಲಿ ದಾಂಧಲೆ ನಡೆಸುತ್ತ ಪುಂಡಾಟ ಮೆರೆಯುತ್ತಿದ್ದ ‘ಓಲ್ಡ್ ಮಕ್ನಾ’ ಎಂಬ ಕಾಡಾನೆಯನ್ನು ಶುಕ್ರವಾರ ತಾಲೂಕಿನ ಬಾಗೆ ಗ್ರಾಮದ ಟಾಟಾ ಎಸ್ಟೇಟ್‌ನಲ್ಲಿ ಗಜಪಡೆಯ ನೆರವಿನೊಂದಿಗೆ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ರವಾನಿಸಲಾಯಿತು.


ನ್ಯಾಯಬೆಲೆ ಅಂಗಡಿ, ಮನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಕಾಡಾನೆಯನ್ನು ಕಳೆದ ವರ್ಷ ಜುಲೈ 29ರಂದು ಉದೇವಾರ ಎಸ್ಟೇಟ್‌ನಲ್ಲಿ ಸೆರೆಹಿಡಿದು ದೂರದ ಮಲೆ ಮಲೆಮಹದೇಶ್ವರ ಬೆಟ್ಟಕ್ಕೆ ಬಿಡಲಾಗಿತ್ತು. ಅಚ್ಚರಿ ಎಂಬಂತೆ ವಾಪಸ್ ಬಂದು ಪುನಃ ತನ್ನ ಪುಂಡಾಟ ಮುಂದುವರಿಸಿತ್ತು. ಇಷ್ಟು ದಿನ ಕಾಫಿ ತೋಟದಲ್ಲಿ ಸುತ್ತಾಡುತ್ತ ಊರೂರು ತಿರುಗಿ ದಾಂಧಲೆ ನಡೆಸುತ್ತಿದ್ದ ಮಕ್ನಾ ಕಾಡಾನೆಯನ್ನು ಇನ್ಮುಂದೆ ದುಬಾರೆ ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಬಂಧಿಸಿ, ಪಳಗಿಸಲಾಗುತ್ತದೆ.
ಸರ್ಕಾರದಿಂದ ಅನುಮತಿ ಪಡೆದ ಅರಣ್ಯ ಇಲಾಖೆ ಸೋಮವಾರ ಕಾರ್ಯಾಚರಣೆ ಆರಂಭಿಸಿ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಗುರುವಾರ ಓಲ್ಡ್ ಮಕ್ನಾ ಅನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲು ಮುಂದಾಗಿತ್ತು. ಆದರೆ, ಕಾರ್ಯಾಚರಣೆಗೆ ಬಂದಿದ್ದ ಒಂದು ಆನೆಗೆ ಅನಾರೋಗ್ಯ ಉಂಟಾಗಿದ್ದು, ದುಬಾರೆ ಶಿಬಿರದಿಂದ ಎರಡು ಆನೆಗಳು ಬರುವುದು ತಡವಾಗಿದ್ದರಿಂದ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.


ಅಭಿಮನ್ಯು, ಹರ್ಷ, ಧನಂಜಯ ಸೇರಿ ಒಟ್ಟು 5 ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಎಲಿಫೆಂಟ್ ಟಾಸ್ಕ್ ಫೋರ್ಸ್ ಜತೆಗೂಡಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದರು. ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಮಕ್ನಾ ಆನೆ ಮೇಲೆ ನಿಗಾ ವಹಿಸಲಾಗಿತ್ತು. ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮಕ್ನಾ ಆನೆಯನ್ನು ಪತ್ತೆ ಹಚ್ಚಿದರು.


ಮಠಸಾಗರ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿದ್ದ ಮಕ್ನಾ ಕಾಡಾನೆಯನ್ನು ಸಿಬ್ಬಂದಿ ಪತ್ತೆ ಹಚ್ಚಿದರು. ನಂತರ ಪಶುವೈದ್ಯ ಮುಜೀಬುರ್ ರೆಹಮಾನ್ ಅರಿವಳಿಕೆ ಚುಚ್ಚುಮದ್ದು ಹಾರಿಸಿದರು. ಇದರಿಂದ ಬೆದರಿದ ಕಾಡಾನೆ ಮಠಸಾಗರ ಎಸ್ಟೇಟ್‌ನಿಂದ ರಾಷ್ಟ್ರೀಯ ಹೆದ್ದಾರಿ 75 ದಾಟಿ ಒಸ್ಸೂರು ಎಸ್ಟೇಟ್ ಪ್ರವೇಶಿಸಿ ಮಂಕಾಗಿ ಅಲೆದಾಟ ನಡೆಸಿತ್ತಾದರೂ ನೆಲಕ್ಕೆ ಬೀಳಲಿಲ್ಲ. ಬಳಿಕ ಮತ್ತೊಮ್ಮೆ ಅರಿವಳಿಕೆ ಚುಚ್ಚು ಮದ್ದು ಹಾರಿಸಲಾಯಿತು. ಇದಾದ ಕೆಲವು ನಿಮಿಷದಲ್ಲೇ ಸಂಪೂರ್ಣ ನಿತ್ರಾಣಗೊಂಡ ಮಕ್ನಾ ಕಾಡಾನೆ ನೆಲಕ್ಕೆ ಉರುಳದ ಕಾರಣ ಪಶುವೈದ್ಯ ಮುಜೀಬುರ್ ರೆಹಮಾನ್ ನಿಂತಿದ್ದ ಆನೆಯ ಹಿಂಬದಿಯ ಕಾಲುಗಳಿಗೆ ಹಗ್ಗ ಹಾಕಿದರು. ನಂತರ ಸಾಕಾನೆ ಸಹಾಯದಿಂದ ಮತ್ತೆರೆಡು ಕಾಲುಗಳಿಗೆ ಹಗ್ಗ ಹಾಕುವ ಮೂಲಕ ಕಾಫಿ ತೋಟದಿಂದ ಎಳೆದು ತರಲು ಯಶಸ್ವಿಯಾದರು.


ಈ ನಡುವೆ ಭಾರಿ ವಿರೋಧ ವ್ಯಕ್ತಪಡಿಸಿದ ಆನೆಯನ್ನು ಅಭಿಮನ್ಯು ಬಲಪ್ರದರ್ಶನ ಮಾಡಿ ಮುಖ್ಯರಸ್ತೆಗೆ ತಂದ ಬಳಿಕ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಿ ದುಬಾರೆ ಶಿಬಿರಕ್ಕೆ ಕಳುಹಿಸಲಾಯಿತು.
ಕಾಡಾನೆ ಸೆರೆ ಕಾರ್ಯಾಚರಣೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಮನೆಗಳ ಮೇಲೆ ದಾಳಿ ನಡೆಸುತ್ತಿದ್ದ ಆನೆ ಸೆರೆ ಹಿಡಿಯುವ ಮೂಲಕ ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡಿದ್ದು ಜನರ ನೆಮ್ಮದಿಗೆ ಕಾರಣವಾಗಿದೆ. ತಾಲೂಕಿನಲ್ಲಿ ಮತ್ತಷ್ಟು ದಾಂಧಲೆ ನಡೆಸುವ ಕಾಡಾನೆಗಳಿದ್ದು, ಅವುಗಳನ್ನೂ ಹಿಡಿಯಲು ಸರ್ಕಾರ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ನೇತೃತ್ವವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಎಸಿಎಫ್ ರಘು, ವಲಯ ಅರಣ್ಯಾಧಿಕಾರಿ ಶಿಲ್ಪಾ ವಹಿಸಿದ್ದರು.

ಏನಿದು ಮಕ್ನಾ?
ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂಬ ಕಾರಣಕ್ಕೆ ಈ ಆನೆಗೆ ಮಕ್ನಾ ಎಂದು ಕರೆಯಲಾಗುತ್ತದೆ. ಮಕ್ನಾ ಆನೆಯನ್ನು ಇತರ ಕಾಡಾನೆಗಳು ತಮ್ಮ ಗುಂಪಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ಈ ಆನೆ ಒಂಟಿಯಾಗಿ ಸುತ್ತಾಡುತ್ತ, ದಾಂಧಲೆ ನಡೆಸುತ್ತಿತ್ತು. ಸಕಲೇಶಪುರ ಭಾಗದಲ್ಲಿ ಓಲ್ಡ್ ಮಕ್ನಾ ಮತ್ತು ನ್ಯೂ ಮಕ್ನಾ ಎಂಬ ಎರಡು ಆನೆಗಳಿವೆ. ಇದೀಗ ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆ.

ಈ ಆನೆ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ತೀವ್ರ ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆ ಹಾನಿ ಜತೆಗೆ, ಆಸ್ತಿಪಾಸ್ತಿ ಮತ್ತು ಜನರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿತ್ತು. ಆದ್ದರಿಂದ 2022 ಜೂನ್ 29ರಂದು ಸೆರೆ ಹಿಡಿದು ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿತ್ತು. ಆದರೆ, 40 ರಿಂದ 45 ದಿನಗಳ ನಂತರ ಅಲ್ಲಿಂದ ವಾಪಸ್ ಬಂದಿದ್ದ ಆನೆ, ಈ ಹಿಂದೆ ದಾಳಿ ನಡೆಸಿದ್ದ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದ ಗಿರೀಶ್ ಎಂಬುವರ ಮನೆ ಮೇಲೆ ಮತ್ತೆ ದಾಳಿ ನಡೆಸಿ, ಮನೆಯ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿತ್ತು. ಬೇಲೂರು ತಾಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿಯನ್ನು ತಿಂದು ಹೋಗಿತ್ತು. ರೇಡಿಯೊ ಕಾಲರ್ ಅಳವಡಿಸಿದ್ದರಿಂದ ಇದೇ ಆನೆ ದಾಳಿ ನಡೆಸುತ್ತಿದೆ ಎಂಬುದು ಗೊತ್ತಾಗಿತ್ತು. ನಿರಂತರ ಉಪಟಳ ನೀಡುತ್ತಿದ್ದ ಆನೆಯನ್ನು ಇದೀಗ ಸೆರೆ ಹಿಡಿದಿರುವುದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಹಿಂದಿನ ದಿನವೇ ದಾಂಧಲೆ
ಸೆರೆ ಕಾರ್ಯಾಚರಣೆ ನಡೆಯುವ ಮುನ್ನಾ ದಿನವಾದ ಗುರುವಾರ ಇದೇ ಓಲ್ಡ್ ಮಕ್ನಾ, ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿತ್ತು. ಅಲ್ಲಿದ್ದ ಅಕ್ಕಿ ಚೀಲಗಳನ್ನು ರಸ್ತೆಗೆ ಎಳೆದು ತಂದು ತಿಂದು ಹಾಕಿತ್ತು. ಪಡಿತರ ಪಡೆಯಲು ಬಂದಿದ್ದ ಜನರು ಆನೆಯನ್ನು ಕಂಡು ಆತಂಕಕ್ಕೆ ಒಳಗಾಗಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಅಂಗಡಿ ಎದುರು ಈ ಆನೆ ದಾಂಧಲೆ ನಡೆಸಿದ್ದರಿಂದ, ಕೆಲಕಾಲ ವಾಹನಗಳ ಸಂಚಾರವೂ ಸ್ಥಗಿತವಾಗಿತ್ತು. ಅಕ್ಕಿ ತಿಂದ ನಂತರ ಆನೆ ಅಲ್ಲಿಂದ ಕಾಲು ಕಿತ್ತಿತ್ತು.