ಜಿಲ್ಲೆ

ಓಲ್ಡ್ ಮಕ್ನಾ ಆಪರೇಷನ್ ಯಶಸ್ವಿ:ದುಬಾರೆ ಸಾಕಾನೆ ಶಿಬಿರಕ್ಕೆ ರವಾನೆ

ಹಾಸನ: ಮಲೆನಾಡು ಭಾಗದಲ್ಲಿ ದಾಂಧಲೆ ನಡೆಸುತ್ತ ಪುಂಡಾಟ ಮೆರೆಯುತ್ತಿದ್ದ ಓಲ್ಡ್ ಮಕ್ನಾ ಎಂಬ ಕಾಡಾನೆಯನ್ನು ಶುಕ್ರವಾರ ತಾಲ್ಲೂಕಿನ ಬಾಗೆ ಗ್ರಾಮದ ಟಾಟಾ ಎಸ್ಟೇಟ್‌ನಲ್ಲಿ ಗಜಪಡೆಯ ನೆರವಿನೊಂದಿಗೆ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ರವಾನಿಸಲಾಯಿತು.

ನ್ಯಾಯಬೆಲೆ ಅಂಗಡಿ, ಮನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಈ ಕಾಡಾನೆಯನ್ನು ಕಳೆದ ವರ್ಷ ಜುಲೈ 29ರಂದು ಉದೇವಾರ ಎಸ್ಟೇಟ್‌ನಲ್ಲಿ ಸೆರೆಹಿಡಿದು ದೂರದ ಮಲೆ ಮಲೆಮಹದೇಶ್ವರ ಬೆಟ್ಟಕ್ಕೆ ಬಿಟ್ಟು ಬಂದರೂ ಅಚ್ಚರಿ ಎಂಬಂತೆ ವಾಪಸ್ ಬಂದು ಪುನಃ ತನ್ನ ಪುಂಡಾಟವನ್ನು ಮುಂದುವರೆಸಿತ್ತು. ಇಷ್ಟು ದಿನ ಕಾಫಿ ತೋಟದಲ್ಲಿ ಸುತ್ತಾಡುತ್ತ, ಊರೂರು ತಿರುಗಿ ದಾಂಧಲೆ ನಡೆಸುತ್ತಿದ್ದ ಓಲ್ಡ್ ಮಕ್ನಾ ಕಾಡಾನೆ ಇನ್ಮುಂದೆ ದುಬಾರೆ ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಬಂಧಿಸಿ, ಪಳಗಿಸಲಾಗುತ್ತದೆ.

ಸರ್ಕಾರದಿಂದ ಅನುಮತಿ ಪಡೆದ ಅರಣ್ಯ ಇಲಾಖೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಗುರುವಾರ ಓಲ್ಡ್ ಮಕ್ನಾ ಅನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲು ಮುಂದಾಗಿತ್ತು. ಆದರೆ, ಕಾರ್ಯಾಚರಣೆಗೆ ಬಂದಿದ್ದ ಒಂದು ಆನೆಗೆ ಅನಾರೋಗ್ಯ ಉಂಟಾಗಿದ್ದು, ದುಬಾರೆ ಆನೆ ಶಿಬಿರದಿಂದ ಬರಬೇಕಿದ್ದ ಎರಡು ಆನೆಗಳು ಬರುವುದು ತಡವಾಗಿದ್ದರಿಂದ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

ಅಭಿಮನ್ಯು, ಹರ್ಷ, ಧನಂಜಯ ಸೇರಿ ಒಟ್ಟು 5 ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಎಲಿಫೆಂಟ್ ಟಾಸ್ಕ್ ಪೋರ್ಸ್ ಜತೆಗೂಡಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಓಲ್ಡ್ ಮಕ್ನಾ ಆನೆ ಮೇಲೆ ನಿಗಾವಹಿಸಲಾಗಿತ್ತು. ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮಕ್ನಾ ಆನೆಯನ್ನು ಪತ್ತೆ ಹಚ್ಚಿದರು. ಮಠಸಾಗರ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿದ್ದ ಮಖ್ನಾ ಕಾಡಾನೆಯನ್ನು ಪತ್ತೆ ಹಚ್ಚಿದ ಸಿಬ್ಬಂದಿ ಪಶುವೈದ್ಯ ಮುಜೀಬುರ್ ರೆಹಮಾನ್ 10.22 ಕ್ಕೆ ಸರಿಯಾಗಿ ಆರವಳಿಕೆ ಚುಚ್ಚುಮದ್ದು ಹಾರಿಸಿದರು. ಇದರಿಂದ ಬೆದರಿದ ಕಾಡಾನೆ ಮಠಸಾಗರ ಎಸ್ಟೇಟ್‌ನಿಂದ ರಾಷ್ಟ್ರೀಯ ಹೆದ್ದಾರಿ 75 ದಾಟಿ ಒಸ್ಸೂರು ಎಸ್ಟೇಟ್ ಪ್ರವೇಶಿಸಿ ಮಂಕಾಗಿ ಅಲೆದಾಟ ನಡೆಸಿತ್ತಾದರೂ ನೆಲಕ್ಕೆ ಬೀಳಲಿಲ್ಲ. ಬಳಿಕ 11.35ಕ್ಕೆ ಮತ್ತೊಮ್ಮೆ ಆರವಳಿಕೆ ಚುಚ್ಚು ಮದ್ದು ಹಾರಿಸಲಾಯಿತು. ಇದಾದ ಕೆಲವು ನಿಮಿಷದಲ್ಲೆ ಸಂಪೂರ್ಣ ನಿತ್ರಾಣಗೊಂಡ ಮಕ್ನಾ ಕಾಡಾನೆ ನೆಲಕ್ಕೆ ಉರುಳದ ಕಾರಣ ಪಶುವೈದ್ಯ ಮುಜೀಬುರ್ ರೆಹಮಾನ್ ನಿಂತಿದ್ದ ಮಖ್ನಾ ಕಾಡಾನೆಗೆ ಹಿಂಬದಿಯ ಕಾಲಿಗೆ ಹಗ್ಗ ಹಾಕಿದರು. ನಂತರ ಸಾಕಾನೆ ಸಹಾಯದಿಂದ ಮತ್ತೆರೆಡು ಕಾಲಿಗೆ ಹಗ್ಗ ಹಾಕುವ ಮೂಲಕ ಕಾಫಿತೋಟದಿಂದ ಎಳೆದು ತರಲು ಯಶಸ್ವಿಯಾದರು. ಈ ನಡುವೆ ಭಾರೀ ವಿರೋಧ ವ್ಯಕ್ತಪಡಿಸಿದ ಮಕ್ನಾಗೆ ಅಭಿಮನ್ಯು ಬಲ ಪ್ರದರ್ಶನ ಮಾಡಿ ಮುಖ್ಯರಸ್ತೆಗೆ ತಂದ ಬಳಿಕ ಕ್ರೇನ್ ಸಹಾಯದಿಂದ ಲಾರಿಗೆ ತುಂಬಿ ದುಬಾರೆ ಶಿಬಿರಕ್ಕೆ ಕಳುಹಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ 2.40 ಗಂಟೆಯಲ್ಲಿ ಮುಕ್ತಾಯಗೊಂಡಿತು.

ಕಾಡಾನೆ ಸೆರೆ ಕಾರ್ಯಾಚರಣೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಮನೆಗಳ ಮೇಲೆ ದಾಳಿ ನಡೆಸುತ್ತಿದ್ದ ಕಾಡಾನೆ ಸೆರೆ ಹಿಡಿಯುವ ಮೂಲಕ ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡಿದ್ದು ಜನರ ನೆಮ್ಮದಿಗೆ ಕಾರಣವಾಗಿದೆ. ತಾಲೂಕಿನಲ್ಲಿ ಮತ್ತಷ್ಟು ದಾಂಧಲೆ ನಡೆಸುವ ಕಾಡಾನೆಗಳಿದ್ದು ಇವುಗಳನ್ನು ಹಿಡಿಯಲು ಸರ್ಕಾರ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಾಚರಣೆ ನೇತೃತ್ವವನ್ನು ಸಕಲೇಶಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಬೇಲೂರು ಎಸಿಎಫ್ ರಘು, ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ವಹಿಸಿದ್ದರು.

ಏನಿದು ಮಕ್ನಾ?

ಗಂಡು ಅಲ್ಲ, ಹೆಣ್ಣು ಅಲ್ಲ ಎಂಬ ಕಾರಣಕ್ಕೆ ಈ ಆನೆಗೆ ಮಕ್ನಾ ಎಂದು ಕರೆಯಲಾಗುತ್ತದೆ. ಈ ಆನೆಯನ್ನು ಇತರೆ ಕಾಡಾನೆಗಳು ತಮ್ಮ ಗುಂಪಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ಈ ಆನೆ ಒಂಟಿಯಾಗಿ ಸುತ್ತಾಡುತ್ತದೆ. ಅಲ್ಲದೆ ದಾಂಧಲೆ ನಡೆಸುತ್ತದೆ. ಸಕಲೇಶಪುರ ಭಾಗದಲ್ಲಿ ಓಲ್ಡ್ ಮಕ್ನಾ ಮತ್ತು ನ್ಯೂವ್ ಮಕ್ನಾ ಎಂಬ ಈ ಗುಂಪಿನ ಎರಡು ಆನೆಗಳಿವೆ. ಇದೀಗ ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆ.

ಈ ಆನೆ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ತೀವ್ರ ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆ ಹಾನಿ ಜತೆಗೆ ಆಸ್ತಿಪಾಸ್ತಿಗಳು ಮತ್ತು ಜನರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿತ್ತು. ಆದ್ದರಿಂದ 2022 ಜೂನ್ 29ರಂದು ಸೆರೆ ಹಿಡಿದು ದೂರದ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿತ್ತು. ಆದರೆ, ಸುಮಾರು 40 ರಿಂದ 45 ದಿನಗಳ ನಂತರ ಅಲ್ಲಿಂದ ನಡೆದು ವಾಪಸ್ ಬಂದಿದ್ದ ಈ ಆನೆ, ಈ ಹಿಂದೆ ದಾಳಿ ನಡೆಸಿದ್ದ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಗಿರೀಶ್ ಎಂಬುವವರ ಮನೆ ಮೇಲೆ ನವೆಂಬರ್ 24 ರಂದು ಮತ್ತೆ ದಾಳಿ ನಡೆಸಿ, ಮನೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿತ್ತು. 2022ರ ಏಪ್ರಿಲ್ 22 ರಂದು ಬೇಲೂರು ತಾಲ್ಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿಯನ್ನು ತಿಂದು ಹೋಗಿತ್ತು. ಮತ್ತೆ ಈ ವರ್ಷ ಫೆ.15 ರಂದು ಅದೇ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿ ತಿಂದು ಹೋಗಿದೆ. ರೆಡಿಯೊ ಕಾಲರ್ ಅಳವಡಿಸಿರುವುದರಿಂದಲೇ ಇದೇ ಆನೆ ದಾಳಿ ನಡೆಸುತ್ತಿದೆ ಎಂಬುದು ಗೊತ್ತಾಗಿದೆ. ನಿರಂತರ ಉಪಟಳ ನೀಡುತ್ತಿದ್ದ ಆನೆಯನ್ನು ಸೆರೆ ಹಿಡಿದಿರುವುದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಹಿಂದಿನ ದಿನವೇ ದಾಂಧಲೆ ನಡೆಸಿದ್ದ ಮಕ್ನಾ

ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವ ಮುನ್ನಾ ದಿನವಾದ ಗುರುವಾರ ಇದೇ ಓಲ್ಡ್ ಮಕ್ನಾ ಆನೆ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿತ್ತು. ಅಲ್ಲಿದ್ದ ಅಕ್ಕಿ ಚೀಲಗಳನ್ನು ರಸ್ತೆಗೆ ಎಳೆದು ತಂದು, ತಿಂದು ಹಾಕಿತ್ತು. ಪಡಿತರ ಪಡೆಯಲು ಬಂದಿದ್ದ ಜನರು, ಆನೆ ಕಂಡು ಆತಂಕಕ್ಕೆ ಒಳಗಾಗಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಅಂಗಡಿ ಎದುರು ಈ ಆನೆ ದಾಂಧಲೆ ನಡೆಸಿದ್ದರಿಂದ, ಕೆಲಕಾಲ ವಾಹನಗಳ ಸಂಚಾರವೂ ಸ್ಥಗಿತವಾಗಿತ್ತು. ಅಕ್ಕಿ ತಿಂದ ನಂತರ ಅನೆ ಅಲ್ಲಿಂದ ಕಾಲು ಕಿತ್ತಿತ್ತು.