ಕಮಲಾಪುರ: ವಿದ್ಯಾರ್ಥಿಯೋರ್ವನನ್ನು ಶಾಲೆಯಿಂದ ಅಪಹರಣ ಮಾಡಿ, ಸುಮಾರು 2 ಕಿಮೀ. ದೂರದ ಮುಳ್ಳು-ಕಂಟಿಯಲ್ಲಿ ಬಿಸಾಡಿ ಹೋದ ಘಟನೆ ಮಹಾಗಾಂವ್ ಕ್ರಾಸ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಶರಣಯ್ಯ ಶಿವಣ್ಣ (13) ಅಪಹರಣಕ್ಕೊಳಗಾದ ವಿದ್ಯಾರ್ಥಿ. ಈತ ಮಹಾಗಾಂವ್ ಕ್ರಾಸ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮಧ್ಯಾಹ್ನದ ಇಂಟರ್‌ರ್ವಲ್ ವೇಳೆ ಹೊರ ಬಂದಿದ್ದು, ಈ ಸಮಯಲ್ಲಿ ಒಮ್ನಿ ಕಾರಿನಲ್ಲಿ ಬಂದ ಅಪರಿಚಿತರು ವಿದ್ಯಾರ್ಥಿಯ ಬಾಯಿಯನ್ನು ಮುಚ್ಚಿ ಹೊತ್ತೊಯ್ದಿದ್ದಾರೆ. ಅಲ್ಲದೆ ಕೈ ಹೆಬ್ಬೆರಳಿಗೆ ಬ್ಲೇಡ್‌ನಿಂದ ಎರಡು- ಮೂರು ಕಡೆ ಕೊಯ್ದಿದ್ದಾರೆ.
ಎರಡು ಕಿಮೀ. ದೂರದ ಕಟ್ಟಳ್ಳಿ ಕ್ರಾಸ್ ಬಳಿ ಪೊಲೀಸ್ ವಾಹನ ಕಾಣಿಸಿದ್ದು, ಕೂಡಲೇ ಅಲ್ಲಿಯೇ ಮುಳ್ಳು-ಕಂಟಿಯಲ್ಲಿ ವಿದ್ಯಾರ್ಥಿಯನ್ನು ದಬ್ಬಿ ಪರಾರಿಯಾಗಿದ್ದಾರೆ. ವಾಹನದಲ್ಲಿ ಬಾಲಕನನ್ನು ತಳ್ಳಿದ್ದರಿಂದ ಹೊಟ್ಟೆಗೆ ಮುಳ್ಳುಗಳು ಚುಚ್ಚಿದ್ದು, ರಕ್ತದ ಗಾಯಗಳಾಗಿವೆ.
ವಿದ್ಯಾರ್ಥಿ ಅಳುತ್ತಲೇ ಮಹಾಗಾಂವ್ ಕ್ರಾಸ್‌ನಲ್ಲಿನ ಮನೆಗೆ ಆಗಮಿಸಿದ್ದು, ನಡೆದ ಘಟನೆಯನ್ನು ಪಾಲಕರಿಗೆ ತಿಳಿಸಿದ್ದಾನೆ. ಅಲ್ಲದೆ ಅಕ್ಕಪಕ್ಕದವರಿಗೂ ವಿಷಯ ತಿಳಿದಿದೆ. ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿದ್ದಂತೆ ಕಟ್ಟೋಳಿ, ಯಕ್ಕಂಚಿ, ಹರಕಂಚಿ, ಮಹಾಗಾಂವ್, ಚಂದ್ರನಗರ ಬಡಾವವಣೆಯ ಮಕ್ಕಳ ಪಾಲಕರು ಶಾಲೆಗೆ ಆಗಮಿಸಿದರು. ಕೆಲವರು ಶಿಕ್ಷಕರಿಗೆ ಕರೆ ಮಾಡಿ, ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತರಿ ಪಡಿಸಿಕೊಂಡರು.
ಮಹಾಗಾAವ್ ಠಾಣೆಯಲ್ಲಿ ದೂರು ದಾಖಲಾಗಿದೆ.