ಜಿಲ್ಲೆ

ಓಬವ್ವ ಜಯಂತಿ ವಿಜೃಂಭಣೆಯಿಂದ ಆಚರಿಸೋಣ

ಚಿತ್ರದುರ್ಗ: ಜಿಲ್ಲಾಡಳಿತದಿಂದ ನಗರದಲ್ಲಿ ನ. 11ರಂದು ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ವಿಜೃಂಭಣೆ, ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಜಯಂತಿ ಆಚರಣೆ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9ಕ್ಕೆ ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇಗುಲ ಮುಂಭಾಗದಿಂದ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಯು ಆರಂಭವಾಗಿ ಪ್ರಮುಖ ವೃತ್ತಗಳ ಮಾರ್ಗವಾಗಿ ಸಂಚರಿಸಲಿದೆ. ಜಾನಪದ ಕಲಾತಂಡಗಳು ಭಾಗವಹಿಸಲಿವೆ. ತರಾಸು ರಂಗಮಂದಿರದಲ್ಲಿ 11ಕ್ಕೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಓಬವ್ವ ಕುರಿತು ಸಂಪನ್ಮೂಲ ವ್ಯಕ್ತಿ ಡಾ.ತಿಪ್ಪೇಸ್ವಾಮಿ ಮತ್ಸಮುದ್ರ ಅವರಿಂದ ವಿಶೇಷ ಉಪನ್ಯಾಸ, ಕಲಾವಿದರಿಂದ ಗೀತಗಾಯನ ಏರ್ಪಡಿಸಲಾಗುವುದು. ಪ್ರಮುಖ ವೃತ್ತಗಳಿಗೆ ಸಿಂಗಾರ, ಮುನ್ನ ದಿನ ಓಬವ್ವ ಪ್ರತಿಮೆಗೆ ವಿದ್ಯುತ್ ಮತ್ತು ಪುಷ್ಪಾಲಂಕಾರ ಮಾಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವೀರವನಿತೆ ಒನಕೆ ಓಬವ್ವ ಹೆಸರು ನಾಮಕರಣ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಸಮಾಜದ ಮುಖಂಡ ಎಚ್.ಸಿ.ನಿರಂಜನಮೂರ್ತಿ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಅಂದು ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಗುವುದು ಎಂದು ಹೇಳಿದರು.

ಬಸವನಾಗಿದೇವ ಶ್ರೀ, ಅಧಿಕಾರಿಗಳಾದ ಕುಮಾರಸ್ವಾಮಿ, ಗಾಯತ್ರಿ, ಎಸ್.ಕೆ.ಮಲ್ಲಿಕಾರ್ಜುನ್, ಜಗದೀಶ್ ಹೆಬ್ಬಳ್ಳಿ, ಎಂ.ರೇಣುಕಾ, ಛಲವಾದಿ ಸಮಾಜದ ಮುಖಂಡರಾದ ಶೇಷಣ್ಣ, ಎಸ್.ವಿ.ಗುರುಮೂರ್ತಿ, ಎನ್.ಬಿ.ಭಾರ್ಗವಿ ದ್ರಾವಿಡ್, ಎಸ್.ಎನ್.ರವಿಕುಮಾರ್, ತಿಪ್ಪೇಸ್ವಾಮಿ, ನವೀನ್ ಇತರರಿದ್ದರು.