ಜಿಲ್ಲೆ

ಓಬಣ್ಣನಹಳ್ಳಿಗೆ ವಿಶೇಷ ಪ್ಯಾಕೇಜ್

ಚಿತ್ರದುರ್ಗ: ಈಚೆಗೆ ಸುರಿದ ಅಧಿಕ ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲೂಕು ಓಬಣ್ಣನಹಳ್ಳಿಗೆ ವಿಶೇಷ ಪ್ಯಾಕೇಜ್ ತರಲು ಶ್ರಮಿಸಲಾಗುವುದು ಎಂದು ಸಂಸದ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.
ಗ್ರಾಮಕ್ಕೆ ಶನಿವಾರ ಭೇಟಿ ನೀಡಿ, ಸಂತ್ರಸ್ಥರ ಅಹವಾಲು ಆಲಿಸಿದ ಬಳಿಕ ಮಾತನಾಡಿ, ತೀವ್ರ ಮಳೆಯಿಂದಾಗಿ ಗ್ರಾಮದ ಬಹುತೇಕ ಮನೆಗಳು ಹಾನಿಯಾಗಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ತಹಸೀಲ್ದಾರ್ ಡಾ.ನಾಗವೇಣಿ ಅವರಿಗೆ ಸೂಚಿಸಿದರು.
ಓಬಣ್ಣನಹಳ್ಳಿ ಸುತ್ತಮುತ್ತ ಗುಡ್ಡವಿದೆ. ಹೆಚ್ಚಿನ ಮಳೆಯಿಂದಾಗಿ ಗುಡ್ಡದಿಂದ ನೀರು ಹರಿದು ಇಡೀ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಅನೇಕ ಮನೆಗಳು ಹಾನಿಗೀಡಾಗಿವೆ. ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ತಹಸೀಲ್ದಾರ್ ಅವರು ಈಗಾಗಲೇ ಹಾನಿಯಾದ ಮನೆಗಳ ಸಂತ್ರಸ್ಥರಿಗೆ 5 ಸಾವಿರ ರೂ. ತುರ್ತು ಪರಿಹಾರ ಕೊಟ್ಟಿದ್ದಾರೆ. ಹಾನಿಯಾಗಿರುವ ಮನೆಗಳು, ಗುಡಿಸಲುಗಳನ್ನು ಪಟ್ಟಿ ಮಾಡಿ ಮನೆ ನಿರ್ಮಾಣಕ್ಕೆ ಕ್ರಮಕ್ಕೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಓಬಣ್ಣನಹಳ್ಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಲ್ಲಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ವಿಶೇಷ ಪ್ಯಾಕೇಜ್‌ಗೆ ಪ್ರಯತ್ನಿಸಲಾಗುವುದು. ಗ್ರಾಮದಲ್ಲಿ ಹಲವರಿಗೆ ವಸತಿ, ನಿವೇಶನ ಸಮಸ್ಯೆ ಇದೆ. ಲಭ್ಯವಿರುವ 3 ಎಕರೆ ಜಾಗದಲ್ಲಿ ಲೇ ಔಟ್ ನಿರ್ಮಿಸಿ, ನಿಯಮಾನುಸಾರ ಹಕ್ಕುಪತ್ರಗಳನ್ನು ವಿತರಿಸಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ತಾಪಂ ಇಒ ಚಂದ್ರಕುಮಾರ್, ಆರ್‌ಐ ಎಚ್.ಕೆ.ಪ್ರಾಣೇಶ್, ಗ್ರಾಮಲೆಕ್ಕಾಧಿಕಾರಿ ದಿಲೀಪ್‌ಸೇನ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಇ ಸ್ಫೂರ್ತಿ ಮತ್ತಿತರ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.