ಜಿಲ್ಲೆ

ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

ಅಥಣಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜತೆಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಜಗದೀಶ ಹವಾಲ್ದಾರ್ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಶ್ರೀಮತಿ ಸಿ.ಬಿ.ರಣಮೋಡೆ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ, ಅಂಚೆ ನೌಕರರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಪ್ರಚಲಿತ ವಿದ್ಯಮಾನದ ಜ್ಯ್ನಾನ ಭಂಡಾರ ದೊರೆಯುತ್ತದೆ. ಪಠ್ಯ ಪುಸ್ತಕದ ವಿದ್ಯಾಭ್ಯಾಸದ ಜತೆಗೆ ಗ್ರಂಥಾಲಯದ ಪುಸ್ತಕ, ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವಂತೆ ವಿಜಯವಾಣಿ ದಿನಪತ್ರಿಕೆ ಹೊರತಂದಿರುವ ವಿದ್ಯಾರ್ಥಿ ಮಿತ್ರ ಸಂಚಿಕೆ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಚಿಕ್ಕ ಮಕ್ಕಳ ತಜ್ಞ ಡಾ.ವಿಶಾಲ ನೂಲಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯವಂತ ಸಮಾಜ ಕಟ್ಟುಲು ಮತ್ತು ಮನುಷ್ಯನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಥಣಿಯ ಪ್ರಧಾನ ಅಂಚೆ ಕಚೇರಿ ಪ್ರಧಾನ ವ್ಯವಸ್ಥಾಪಕ ಉದಯ ಉಗಾರೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಅಂಚೆ ಇಲಾಖೆ ಹುಟ್ಟು ಮತ್ತು ಬೆಳವಣಿಗೆ ಕುರಿತು ಮಾಹಿತಿ ನೀಡಿ, ಇತ್ತೀಚಿನ ದಿನಗಳಲ್ಲಿ ಆಧಾರ್ ತಿದ್ದುಪಡಿ, ರೈಲ್ವೆ ಟಿಕೆಟ್ ಬುಕ್ಕಿಂಗ್, ಕಾಗದ ಪತ್ರಗಳ ವಿನಿಮಯ, ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜನರಿಗೆ ತಂದಿದೆ. ಶಾಲಾ ಮಕ್ಕಳಿಗೆ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.

ಪತ್ರಿಕಾ ದಿನಾಚರಣೆ ನಿಮಿತ್ತ ಅಥಣಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪರಶುರಾಮ ನಂದೇಶ್ವರ, ನಿಕಟ ಪೂರ್ವ ಅಧ್ಯಕ್ಷ ಅಣ್ಣಾಸಾಹೇಬ ತೆಲಸಂಗ, ಹಿರಿಯ ಪತ್ರಕರ್ತ ಚಂದ್ರಶೇಖರ ತೆವರಟ್ಟಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕನ್ನಡಪ್ರಭ ಮತ್ತು ವಿಜಯವಾಣಿ ದಿನಪತ್ರಿಕೆಗಳ ವಿದ್ಯಾರ್ಥಿ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.ಕು. ಸೂರ್ತಿ ದಾಬಳ್ಳಿ ಸ್ವಾಗತಿಸಿದರು. ಕು. ಕ್ರಿಯಾ ರಾಥೋಡ ನಿರೂಪಿಸಿ, ವಂದಿಸಿದರು.