ಜಿಲ್ಲೆ

ಓದುವ ಸಮಯದಲ್ಲಿ ಜೀವನ ವ್ಯರ್ಥ ಮಾಡಿಕೊಳ್ಳಬೇಡಿ: ಡಾ. ಅಶೋಕಗೌಡ

ಹಾಸನ
ಓದುವ ಸಮಯದಲ್ಲಿ ಮೊಬೈಲ್ ಸೇರಿದಂತೆ ಇತರೆ ಕಡೆ ವಿದ್ಯಾರ್ಥಿಗಳು ಗಮನ ಕೊಡದೆ ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಮುಂದೆ ಸಾಗುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಮಂಗಳಾ ಎಜಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಅಶೋಕಗೌಡ ಕರೆ ನೀಡಿದರು.
ನಗರದ ಹೊರವಲಯ ಡೈರಿ ವೃತ್ತದ ಬಳಿ ಇರುವ ಮಂಗಳಾ ಪಿಯು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಂಗಳಾ ನೀಟ್ ಅಕಡೆಮಿ ತರಬೇತಿ ನೂತನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಇಟ್ಟಿರುವ ಭರವಸೆ ಈಡೇರಿಸುವುದು ನಿಮ್ಮ ಗುರಿಯಾಗಬೇಕು. ಓದುವ ಸಮಯದಲ್ಲಿ ಮೊಬೈಲ್ ಇತರೆ ಕಡೆ ಗಮನ ನೀಡಿದರೆ ನಿಮ್ಮ ಮುಂದಿನ ಭವಿಷ್ಯ ಹಾಳಾಗುತ್ತದೆ ಎಂದು ಕಿವಿಮಾತು ಹೇಳಿದರು.
ವೈದ್ಯರಾಗಬೇಕು, ಇಂಜಿನಿಯರ್ ಹಾಗೂ ಇತರೆ ಆಸೆಗಳನ್ನು ತಂದೆ-ತಾಯಿ ಮಕ್ಕಳ ಮೇಲೆ ಇಟ್ಟುಕೊಂಡಿರುತ್ತಾರೆ. ಆದರೆ ನಿಮ್ಮ ನಿರ್ಧಾರ ನಿಮ್ಮ ಕೈಲಿ ಇರುತ್ತದೆ. ಯಾವತ್ತು ಉತ್ತಮ ನಿರ್ಧಾರ ನಿಮ್ಮಲ್ಲಿ ಇದ್ದರೆ ಬದಲಾವಣೆ ಮಾಡಿಕೊಳ್ಳಬಾರದು. ತಮ್ಮನ್ನು ಎಂದಿಗೂ ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬೇಡಿ ಹಾಗೂ ತಮ್ಮತನವನ್ನು ಯಾವತ್ತು ಬಿಟ್ಟುಕೊಡಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಕಾಲೇಜು ಆಫ್ ಫಾರಸ್ಟರಿ ಸಹಾಯಕ ರಿಜಿಸ್ಟರ್ ಮಣಿಕಂಠ, ಮಂಗಳಾ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಅಮಲಾ ಬಿಜ್ಜೊ, ಪಿಯು ಕಾಲೇಜು ಪ್ರಾಂಶುಪಾಲ ಗುರುರಾಜು, ಜಗದೀಶ್ ಚೌಡವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.