ಚಿತ್ರದುರ್ಗ: ಮಕ್ಕಳಲ್ಲಿ ಪುಸ್ತಕ ಓದಿನ ಅಭಿರುಚಿ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ಉಚಿತ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜತೆಗೆ ಮಕ್ಕಳಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಪರಿಚಯಿಸಬೇಕು. ಸಣ್ಣ ಕಥೆ, ನೀತಿ ಪಾಠ, ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಿವೆ. ಮಕ್ಕಳು ಮೊಬೈಲ್ ಬದಲು ಪುಸ್ತಕ ಹಿಡಿದರೆ ಅವರ ಜ್ಞಾನವೃದ್ಧಿ ಆಗುತ್ತದೆ. ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮಕ್ಕಳಲ್ಲಿ ಸಾಹಿತ್ಯ, ಸಂಗೀತ, ಜಾನಪದ, ನೃತ್ಯಕಲೆ ಬಗ್ಗೆ ಆಸಕ್ತಿ ಮೂಡಿಸಬೇಕಿದೆ ಎಂದರು.
ಸಾಹಿತಿ ಸಿ.ಬಿ. ಶೈಲಾ ಜಯಕುಮಾರ್ ಮಾತನಾಡಿ, ಪುಸ್ತಕಗಳು ಏಕಾಗ್ರತೆ, ಸ್ಮರಣ ಶಕ್ತಿ ಹೆಚ್ಚಿಸುತ್ತವೆ. ಪುಸ್ತಕಗಳ ಓದಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ. ಒತ್ತಡ ನಿವಾರಣೆ, ಪದಸಂಪತ್ತು ಹೆಚ್ಚುತ್ತದೆ, ಮನಸ್ಸಿನ ವಿಕಸನಕ್ಕೆ ನೆರವಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಆಸಕ್ತರೆಲ್ಲರೂ ಸೇರಿ 2003ರಿಂದ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. 13 ಸಾವಿರ ಪುಸ್ತಕ ಸಂಗ್ರಹಿಸಿದ್ದೇವೆ. 900 ಸರ್ಕಾರಿ ಪ್ರಾಥಮಿಕ ಶಾಲೆಗೆ ಈವರೆಗೆ 90 ಸಾವಿರ ಪುಸ್ತಕಗಳನ್ನು ಕೊಟ್ಟಿದ್ದೇವೆ. ಚಿತ್ರದುರ್ಗ 9ನೇ ಜಿಲ್ಲೆ. ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮೂಡಿಸುವುದು ನಮ್ಮ ಉದ್ದೇಶ ಎಂದರು.
ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಮಂಜುನಾಥ ಭಾಗವತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ನಾಗರಾಜ್, ಶ್ರೀನಿವಾಸ್ ವಿ. ಮಳಲಿ, ಹುರಳಿ ಎಂ. ಬಸವರಾಜ್ ಮತ್ತಿತರರು ಇದ್ದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಿತ್ರದುರ್ಗ ಮತ್ತು ಚಿಕ್ಕಮಗಳೂರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗವಿತ್ತು.