ಜಿಲ್ಲೆ

ಓದುಗರು ಸಮಾಜಮುಖಿಯಾಗಿ ಚಿಂತಿಸಲಿ: ಪ್ರೊ.ಓ.ಎಲ್.ನಾಗಭೂಷಣಸ್ವಾಮಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ರತಿಯೊಬ್ಬ ಓದುಗರೂ ಸಮಾಜಮುಖಿಯಾಗಿ ಚಿಂತಿಸಬೇಕು. ಆಗಲೇ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗಲಿದೆ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ತಿಳಿಸಿದರು.

ಮಹಾರಾಜ ಕಾಲೇಜಿನ ಬಿ.ಎಲ್.ಹಾಲ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡು ದಿನಗಳ ಸಂಶೋಧನಾ ಕಮ್ಮಟ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಓದುಗರ ಮನಸ್ಸಿಗೆ ಕೃತಿ ಯಾವ ಪರಿಣಾಮ ಬೀರುತ್ತದೆ ಎಂಬುದು ಮುಖ್ಯ. ಅದನ್ನು ವಾಚಕ ಸಂವೇದನೆ ಎಂದು ಕರೆಯುತ್ತಾರೆ. ಉದಾಹರಣೆಗೆ ನಾನು ಮಾತನಾಡುತ್ತಿರುವುದನ್ನು ಎಲ್ಲರೂ ಒಂದೇ ರೀತಿ ಅರ್ಥೈಸಿಕೊಳ್ಳುವುದಿಲ್ಲ. ಹಾಗೆಯೇ ಕೃತಿಯೊಂದನ್ನು ಓದುವಾಗ ಒಬ್ಬೊಬ್ಬರು ಒಂದೊಂದು ರೀತಿ ಅಲೋಚಿಸಿಕೊಂಡು ಓದಿಕೊಳ್ಳುತ್ತಾರೆ ಎಂದರು.

ಒಂದು ಕಾದಂಬರಿಯನ್ನು ಅಧ್ಯಯನ ಮಾಡುವಾಗ ಅದರಲ್ಲಿನ ಚರ್ಚಿತ ವಿಷಯ ಮುಖ್ಯವಾಗಲಿದೆ. ಜತೆಗೆ ಸಂಶೋಧನೆಯಲ್ಲಿ ಯಾವ ಕಾದಂಬರಿ ಯಾವ ವಿಷಯವನ್ನು ಚರ್ಚೆ ಮಾಡುತ್ತಿದೆ ಎಂಬುದು ಸಹ ಮುಖ್ಯ.

ಯಾವ ಕಥಾ ವಸ್ತುವಿದೆ. ಬದಲಾವಣೆ ಆಪೇಕ್ಷಣೆಯೋ... ಅಲ್ಲವೋ..? ಬದಲಾವಣೆ ಕುರಿತು ಏನು ಧೋರಣೆ ಇದೆ? ಕನ್ನಡದಲ್ಲಿ ಕಥೆ ಇಲ್ಲದ ಕಾದಂಬರಿ ಯಾವುದಿದೆ? ಎಂಬುದನ್ನೆಲ್ಲ ಆಲೋಚಿಸಬೇಕು ಎಂದರು.

ಡಾ.ಹಳೆಮನೆ ರಾಜಶೇಖರ್ ಅವರ ‘ಒಡಲುಗೊಂಡವರು’ ಕಾದಂಬರಿಯ ಮೊದಲಾರ್ಧವು ಕೈಗಾರೀಕರಣದ ಮುಂಚಿನ ಸಮಾಜದ ಚಿತ್ರಣವನ್ನು ಉತ್ತಮ ಕಟ್ಟಿಕೊಡುತ್ತದೆ.

ಒಂದು ಊರಿನ ಚಿತ್ರಣ, ಅಲ್ಲಿನ ಪರಿಸರವನ್ನು ಚೆನ್ನಾಗಿ ಹೇಳಿದ್ದಾರೆ. ಆದರೆ, ಒಂದು ಊರು ಅಷ್ಟೊಂದು ಒಳ್ಳೆಯ ಊರಾಗಿರಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸಂಚಾಲಕ ಡಾ.ಬಸವರಾಜ ಕಲ್ಗುಡಿ, ಸಾಹಿತಿ ಡಾ.ಗುರುಪಾದ ಮರಿಗುದ್ದಿ, ಪ್ರಾಧ್ಯಾಪಕ ಡಾ.ಹಳೆಮನೆ ರಾಜಶೇಖರ್, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಸಿ.ದೇವರಾಜೇಗೌಡ, ಆಡಳಿತಾಧಿಕಾರಿ ಡಾ.ಕೆ.ತಿಮ್ಮಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ವಿಜಯಲಕ್ಷ್ಮೀ ಇನ್ನಿತರರಿದ್ದರು.