ಚಿಕ್ಕಮಗಳೂರು: ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ನಮ್ಮಲ್ಲಿ ಕ್ರಿಯಾಶೀಲ, ವೈಚಾರಿಕ ಗುಣಗಳು ಮೂಡುತ್ತವೆ ಎಂದು ಮಾಜಿ ಶಾಸಕ ವೈಎಸ್ವಿ ದತ್ತ ಹೇಳಿದರು. ತಾಲೂಕಿನ ಕುಂದೂರು ಬನವಾಸಿ ನಿವಾಸದಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಿರುವ ಕುಂಭಕ ಓದುವ ಬಳಗಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕದಿಂದ ಮಸ್ತಕ ಬೆಳೆಯುತ್ತದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಜನ ತಮ್ಮ ಮನೆಯ ಕಪಾಟಿನಲ್ಲಿ ಕನಿಷ್ಠ 10 ಪುಸ್ತಕಗಳನ್ನಾದರೂ ಇಡಬೇಕು. ಪ್ರತಿದಿನ ಕನಿಷ್ಠ ಒಂದು ಪುಟವನ್ನಾದರೂ ಓದಬೇಕು. ಓದುಗ ಬಳಗವನ್ನು ಸೃಷ್ಟಿಸುವುದು ಬಹುದೊಡ್ಡ ಕೆಲಸ ಮತ್ತು ಸಾಹಸ. ಸಮಾಜದ ಆರೋಗ್ಯದ ದೃಷ್ಟಿಯಿಂದ ಇಂತಹ ಬಳಗಗಳು ಹೆಚ್ಚಾಗಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ, ಓದುವ ಪ್ರವೃತ್ತಿ ಬೆಳೆಸಿಕೊಳ್ಳುವುದರಿಂದ ಸುಸಂಸ್ಕೃತ ಸಮಾಜ ನಿರ್ವಣವಾಗುತ್ತದೆ ಎಂದರು. ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, ಪ್ರತಿ ತಿಂಗಳೂ ಬಳಗದ ಪ್ರತಿಯೊಬ್ಬರಿಗೂ ಒಂದೊಂದು ಸಾಹಿತ್ಯದ ಪುಸ್ತಕ ನೀಡಲಾಗುವುದು. ತಿಂಗಳ ಕೊನೆಯಲ್ಲಿ ಸಾಹಿತಿಯೊಂದಿಗೆ ಆ ಪುಸ್ತಕದ ಕುರಿತು ಓದುಗರಿಂದ ಸಂವಾದ ನಡೆಸಲಾಗುವುದು ಎಂದು ಹೇಳಿದರು.