ಚಿಕ್ಕಮಗಳೂರಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಉದ್ಘಾಟಿಸಿದರು. 
ಜಿಲ್ಲೆ

ಓದು ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ

ಚಿಕ್ಕಮಗಳೂರು: ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ತಿಳಿಸಿದರು.

ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ತಲೆತಗ್ಗಿಸಿ ಓದಿದರೆ ಅದು ನಮ್ಮನ್ನು ಜೀವನವಿಡಿ ತಲೆಯೆತ್ತಿ ನಡೆಯುವಂತೆ ಮಾಡುತ್ತದೆ. ಬಡತನವೆಂಬ ಶತ್ರುವನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಮುಖವಾದ ಅಸ್ತç. ವಿದ್ಯಾವಂತರನ್ನು ಮಾತ್ರ ಸಮಾಜ ಗೌರವಿಸಿ, ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯೆ ಯಾರೂ ಕದಿಯಲಾರದ ಆಸ್ತಿ ಎಂದ ಅವರು ಮಕ್ಕಳು ಇದನ್ನು ಮನಗಂಡು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಸಲಹೆ ನೀಡಿದರು.

ಎಂಎಲ್‌ಎAಎನ್ ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ. ಜಿ.ಎಂ. ಗಣೇಶ್ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ಅವರಿಗೆ ಇಷ್ಟವಾಗುವ ಸಣ್ಣ ಸಣ್ಣ ಪುಸ್ತಕಗಳನ್ನು ಕೊಡಿಸಬೇಕು. ಆ ಮೂಲಕ ಓದುವ ಹವ್ಯಾಸವನ್ನು ಅವರಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಹೆತ್ತವರು ತಮ್ಮ ಮಕ್ಕಳ ಚಲನವಲನಗಳನ್ನು ನಿರಂತರವಾಗಿ ಗಮನಿಸಬೇಕು. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಅವರನ್ನು ಪ್ರೋತ್ಸಾಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಸ್. ವೆಂಕಟೇಶ್, ತಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರಿಗೆ ನಮ್ಮ ಸಂಸ್ಕÈತಿ, ಸಂಸ್ಕಾರವನ್ನು ಕಲಿಸುವ ಕೆಲಸವನ್ನೂ ಮಾಡುತ್ತಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಬಿ.ಆರ್.ಕುಮಾರ್ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕÈತಿಕ ಕಾರ್ಯಕ್ರಮ ಜರುಗಿತು. ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ.ಎ. ದಿನೇಶ್ ಗುಪ್ತ, ಕಾರ್ಯದರ್ಶಿ ಜಯಂತಿ ಶೇಖರ್. ಜಂಟಿ ಕಾರ್ಯದರ್ಶಿ ಎಂ.ಎ. ವಿನಯ್ ಕುಮಾರ್, ಶಿಕ್ಷಕರಾದ ರಮೇಶ್ ಬೊಂಗಾಳೆ, ಚೂಡಾಮಣಿ, ವಿದ್ಯಾರ್ಥಿಗಳಾದ ಕವನ. ರಿಷಾ ಉಪಸ್ಥಿತರಿದ್ದರು.