ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಮುಖ್ಯ ಗ್ರಂಥಪಾಲಕ ರಾಜಕುಮಾರ ಕುಲಕರ್ಣಿ ಮಾತನಾಡಿದರು. ಪ್ರಾಚಾರ್ಯ ಎಸ್.ಆರ್.ಮುಗನೂರಮಠ, ಗ್ರಂಥಪಾಲಕ ಸಂತೋಷ ಗುರವ, ಐಕ್ಯೂಎಸಿ ಸಂಯೋಜಕ ಡಾ.ಎ.ಯು.ರಾಠೋಡ, ಪ್ರಾಧ್ಯಾಪಕ ಡಾ.ಕೆಂಗಲಗುತ್ತಿ ಉಪಸ್ಥಿತರಿದ್ದರು. 
ಜಿಲ್ಲೆ

ಓದು ಬದುಕಿನ ಭಾಗವಾಗಬೇಕು

ಬಾಗಲಕೋಟೆ: ಗ್ರಂಥಾಲಯಕ್ಕೆ ಚಳುವಳಿಯ ಸ್ವರೂಪ ನೀಡಿ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯ ಮೂಲಕ ಗ್ರಂಥಾಲಯ ಕ್ಷೇತ್ರವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಗೊಳಿಸಿದ ಡಾ.ಎಸ್.ಆರ್.ರಂಗನಾಥನ್ ಅವರು ಇಂದಿಗೂ ಗ್ರಂಥಾಲಯ ಬೆಳವಣಿಗೆಯ ಹರಿಕಾರರಾಗಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಮುಖ್ಯ ಗ್ರಂಥಪಾಲಕ ರಾಜಕುಮಾರ ಕುಲಕರ್ಣಿ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಎಸ್.ಆರ್.ರಂಗನಾಥನ್ ಗಣಿತ ವಿಷಯದಲ್ಲಿ ಶಿಕ್ಷಣ ಪಡೆದು ಉಪನ್ಯಾಸಕರಾಗಿದ್ದ ಅವರು ಗ್ರಂಥಪಾಲಕರಾಗಿ ನೇಮಕಗೊಂಡು ಲಂಡನ್‌ನಲ್ಲಿ ಗ್ರಂಥಾಲಯ ತರಬೇತಿ ಪಡೆದು ಮದ್ರಾಸ್ ವಿವಿಯ ಗ್ರಂಥಾಲಯವನ್ನು ಪ್ರಯೋಗಾಲಯವಾಗಿಸಿಕೊಂಡು ಆ ಕ್ಷೇತ್ರದಲ್ಲಿ ಮಹತ್ತರವಾದದ್ದನ್ನು ಸಾಧಿಸಿದರು ಎಂದರು.

ವೈಜ್ಞಾನಿಕ ಕ್ರಮದಲ್ಲಿ ಪುಸ್ತಕಗಳ ಜೋಡಣೆ ಮಾಡುವ ವಿಧಾನವನ್ನು ಪರಿಚಯಿಸಿ ಗ್ರಂಥಾಲಯ ಆಡಳಿತದ ಪಂಚ ಸೂತ್ರಗಳನ್ನು ರಚಿಸಿದರು. ಗ್ರಂಥಾಲಯ ವಿಜ್ಞಾನದ ಶಿಕ್ಷಣ, ತರಬೇತಿ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಶಾರದಾ ರಂಗನಾಥನ್ ಟ್ರಸ್ಟ್ ಸ್ಥಾಪಿಸಿ ತಮ್ಮ ಉಳಿತಾಯದ ಹಣವನ್ನೆಲ್ಲ ಗ್ರಂಥಾಲಯಗಳ ಅಭಿವೃದ್ಧಿಗೆ ಧಾರೆ ಎರೆದರು.

ಸಮಾಜದ ಅಭಿವೃದ್ಧಿಗೆ ಅತ್ಯುತ್ತಮ ಓದುಗರ ಅವಶ್ಯಕತೆ ಇದೆ. ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡು ಅದನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕು. ಆದರೆ ಸದ್ಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಆಧಾರಿತ ಸಿದ್ಧ ಮಾಹಿತಿಯ ಓದನ್ನು ಬಯಸುತ್ತಿದ್ದಾರೆ. ಆಳವಾದ ಅಧ್ಯಯನದ ಕೊರತೆಯಿಂದ ವಿಷಯ ವಿಶ್ಲೇಷಣೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವರು. ಅತಿಯಾದ ತಂತ್ರಜ್ಞಾನದ ಬಳಕೆಯಿಂದ ಓದುವ ಅಭಿರುಚಿ ಕ್ಷೀಣಿಸುತ್ತಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ಅಸಂವೇದಿಗಳಾಗುತ್ತಿರುವುದು ವಿಷಾದಕರ ಸಂಗತಿ ಎಂದರು.

ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಮಾತನಾಡಿ, ಪುಸ್ತಕಗಳು ಜಗತ್ತನ್ನು ಆಳುತ್ತವೆ. ಪ್ರಾಚೀನ ಕಾಲದಿಂದಲೂ ಶಿಕ್ಷಣ ಕೇಂದ್ರಗಳಲ್ಲಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತ ಬಂದಿವೆ. ನಳಂದದಷ್ಟೆ ಹಳೆಯದಾದ ಸಾಲೋಟಗಿ ಮತ್ತು ಕಲಬುರ್ಗಿಯ ನಾಗಾವಿ ಪ್ರಾಚೀನ ಘಟಿಕಾ ಸ್ಥಳಗಳಾಗಿವೆ. ಭಾವನೆ ಮತ್ತು ಜ್ಞಾನದ ಬೆಸುಗೆಯಾಗಬೇಕಾದರೆ ಪುಸ್ತಕಗಳ ಓದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಸಂತೋಷ ಗುರವ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಎ.ಯು.ರಾಠೋಡ, ಪ್ರಾಧ್ಯಾಪಕ ಡಾ.ಕೆಂಗಲಗುತ್ತಿ ಉಪಸ್ಥಿತರಿದ್ದರು.